“ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ” : ಸಿದ್ದರಾಮಯ್ಯ ಟ್ವೀಟ್…

194
firstsuddi

ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆ ಮಾಜಿ ಸಚಿವ, ಬಿಜೆಪಿ ಮುಖಂಡ ಬಾಬುರಾವ್ ಚಿಂಚಸೂರು ಅವರು ಸಿದ್ದರಾಮಯ್ಯ ಅವರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಖಾರವಾಗಿಯೇ ಪ್ರತಿಕ್ರಯಿಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ. ಕಾನೂನು ವಿದ್ಯಾರ್ಥಿಯಾಗಿ 1972ರಲ್ಲಿ ರಾಜಕೀಯ ಪ್ರವೇಶ ಮಾಡಿದಾಗಿಂದ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ವ್ಯವಸ್ಥೆ ಪರ ಹೋರಾಡುತ್ತಾ ಬಂದಿದ್ದೇನೆ, ಬಿಜೆಪಿ ಈ ಎಲ್ಲಾ ತತ್ವಗಳಿಗೂ ವಿರುದ್ಧವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ಸಾಧ್ಯವೇ? ಇದೊಂದು ಮೂರ್ಖತನದ ಪ್ರಚಾರ. ಯಾರೇ ಆಗಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದಾಗ ಪದೇ ಪದೇ ಪಕ್ಷ ಬದಲಿಸುವಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ. ಅವಕಾಶವಾದಿ ರಾಜಕಾರಣಿಗಳು ಮಾತ್ರ ಅಧಿಕಾರ ಹುಡುಕಿಕೊಂಡು ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಂದ ನೇರವಾಗಿ ಸಿಗಬೇಕೇ ಹೊರತು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಹಪಹಪಿಸಬಾರದು. ಬಾದಾಮಿ ಕ್ಷೇತ್ರದಲ್ಲಿ ರೂ.500 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೇಡಿಕೆ ಇಟ್ಟಿದ್ದೀನಿ. ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ, ಆಗಲೇ ಬಿಜೆಪಿಯ ಕೆಲವು ನಾಯಕರು ಬಾದಾಮಿಗೆ ನಾವು ರೂ.650 ಕೋಟಿ ಕೊಟ್ಟಿದ್ದೀವಿ ಅಂತ ಪ್ರಚಾರ ಶುರು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.