ಮಂಗಳೂರು : ಅಪರಿಚಿತ ಯುವಕನೋರ್ವನ ರೈಲಿನಡಿಗೆ ಸಿಲುಕಿದ ಮೃತದೇಹ ಮಾರ್ಗನ್ಸ್ ಗೇಟ್ ಎರಡನೇ ಸೇತುವೆಯಡಿ ರೈಲು ಹಳಿಗಳ ಮೇಲೆ ನಿನ್ನೆ ತಡರಾತ್ರಿ ಪತ್ತೆಯಾಗಿದೆ. ಸುಮಾರು 30-35 ವರ್ಷ ಒಳಗಿನ ಯುವಕನ ಮೃತದೇಹ ಇದಾಗಿದ್ದು, ಸಮೀಪದಲ್ಲೇ ಬ್ಯಾಗ್, ಅದರೊಳಗೆ ಬಿಸ್ಲರಿ ಬಾಟಲ್ ನಲ್ಲಿ ಮದ್ಯ ಹಾಗೂ ಧರಿಸಿದ್ದ ಪ್ಯಾಂಟಿನ ಕಿಸೆಯಲ್ಲಿ ತ್ರಿಶೂರಿನ ಬ್ಯಾಂಕೊಂದರಲ್ಲಿ ಹಣ ಪಾವತಿಸಿದ ರಶೀದಿಯೊಂದು ಪತ್ತೆಯಾಗಿದೆ. ಪರ್ಸ್ನಲ್ಲಿ ಚಿಲ್ಲರೆ ಹಣ ಬಿಟ್ಟರೆ ಮೊಬೈಲ್ ಫೋನ್ ಕೂಡಾ ಇರಲಿಲ್ಲ. ಕೇರಳದಿಂದ ಬರುವ ರೈಲಿನಿಂದ ಯುವಕ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳೂ ಇವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮಂಗಳೂರು ರೈಲ್ವೇ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.