ಮೂಡಿಗೆರೆಯಲ್ಲಿ ಅಪರೂಪ ಪದ್ಧತಿಯ ಸಾಮೂಹಿಕ ಸರಳ ವಿವಾಹ : ಚಿತ್ರನಟಿ ಮಾಲಾಶ್ರೀ ಭಾಗಿ

1742

ಮೂಡಿಗೆರೆ : ಅಲಂಕಾರವಾಗಿ ಕೂತಿರೋ ನವ ಜೋಡಿಗಳು. ದಲಿತ ಮಂತ್ರ ಘೋಷಣೆಗೆ ತಕ್ಕಂತೆ ವಾದ್ಯಗಳ ಮೇಳ. ಕೂಡಿ ಬಾಳುವ ಪ್ರತಿಜ್ಞೆ ಮಾಡ್ತಿರೋ ವಧು-ವರರು. ಚುನಾವಣಾ ನೀತಿ ಸಂಹಿತೆಯಿಂದ ಖಾಲಿ-ಖಾಲಿ ವೇದಿಕೆ. ಹೌದು, ಇದೆಲ್ಲಾ ಕಂಡು ಬಂದದ್ದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ. ಮಹಿಳಾ ದಿನಾಚರಣೆ ಹಾಗೂ ಅಂಬೇಡ್ಕರ್ ನೆನಪಾರ್ಥ 18 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಲೆನಾಡು ಸಾಂಸ್ಕ್ರತಿಕ ಸಂಭ್ರಮದಡಿ ಸಾಮೂಹಿಕ ವಿವಾಹ ನಡೆಸಿಕೊಂಡು ಬರ್ತಿದ್ದಾರೆ. ಈ ವಿವಾಹದಲ್ಲಿ ಮಲೆನಾಡ ಸಂಸ್ಕøತಿ ಚಿತ್ರಣ ಅನಾವರಣಗೊಳ್ತು. ಮದುವೆಗು ಮುನ್ನ ನೂತನ ವಧು-ವರರನ್ನ ಹಳ್ಳಿ ವ್ಯಾದಗಳಿಂದ ಮೆರವಣಿಗೆಯಲ್ಲಿ ಕರೆತರಲಾಯ್ತು. ಮಂಟಪದ ಮುಂಭಾಗ ವಧುವಿನ ಕಡೆಯವ್ರು ವರ ಕಾಲು ತೊಳೆದು ಸ್ವಾಗತಿಸಿಕೊಂಡ್ರು. ದಲಿತ ಪುರೋಹಿತರು ಹಾಗೂ ಮುತ್ತೈದೆಯರು ಸೋಬಾನೆ ಪದ ಹಾಡಿ ಮಲೆನಾಡ ಸಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡ್ಕೊಂಡು ಹೊಸ ಜೀವನಕ್ಕೆ ಕಾಲಿಟ್ರು.

ಇನ್ನು ಈ ವಿವಾಹಕ್ಕೆ ನಟಿ ಮಾಲಾಶ್ರೀ ಈ ಸರಳ ವಿವಾಹಕ್ಕೆ ಸಾಕ್ಷಿಯಾದ್ರು. ವಿಶೇಷ ಅಂದ್ರೆ, ಈ ಸರಳ ವಿವಾಹಕ್ಕೆ ಚುನಾವಣ ನೀತಿ ಸಂಹಿತೆ ಬಿಸಿ ತಟ್ಟಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದಿದ್ರಿಂದ ವಿಧಾನ ಪರಿಷತ್ ಸದಸ್ಯ, ಮೂಡಿಗೆರೆ ಟಿಕೆಟ್ ಆಕಾಂಕ್ಷಿ ಮೋಟ್ಟಮ್ಮ ಬಂದಿರಲಿಲ್ಲ. ಬದಲಾಗಿ ಮಗಳು ನಯನ ಮೋಟಮ್ಮ ಕಾರ್ಯಕ್ರಮ ನಡೆಸಿಕೊಟ್ರು. ಇತ್ತ ವೇದಿಕೆ ಮೇಲೆ ಚೇರುಗಳು ಇರಲಿಲ್ಲ. ಯಾವುದೇ ರಾಜಕೀಯ ಭಾಷಣವೂ ಇಲ್ಲದೆ ಮದುವೆ ಮುಗಿಸಿದ್ರು. ಅಷ್ಟೇ ಅಲ್ಲದೆ ಕೇವಲ ವಧು-ವರರಿಗೆ ಮಾತ್ರ ಅಡುಗೆ ಮಾಡಿಸಿದ್ದು ಬಿಟ್ಟರೆ ಬಂದ ಸಂಬಂಧಿಕರಿಗೂ ಊಟದ ವ್ಯವಸ್ಥೆ ಇರಲಿಲ್ಲ. ಆದ್ರು, ಸಾವಿರಾರು ಜನ ವಿವಾಹಕ್ಕೆ ಬಂದು ಅಪರೂಪದ ದಲಿತ ಪದ್ದತಿಯ ವಿವಾಹವನ್ನ ಕಣ್ತುಂಬಿಕೊಂಡ್ರು. ಮುಂದಿನ ದಿನಗಳಲ್ಲೂ ನಾವು ಹಾಗೂ ನಮ್ಮ ಮಕ್ಕಳು ಅನ್ಯೋನ್ಯವಾಗಿ ಇರುತ್ತೇವೆಂದು ನವ ವಧು-ವರರು ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರ. ಇದನ್ನೆಲ್ಲಾ ನೋಡಿ ನಟಿ ಮಾಲಾಶ್ರೀಯೂ ಸಂತಸ ವ್ಯಕ್ತಪಡಿಸಿದ್ರು.

ಇತ್ತೀಚೆಗೆ ಬಡವರೋ-ಶ್ರೀಮಂತರೋ ಅವರ ಶಕ್ತಿಗನುಸಾರವಾಗಿ ವೈಭವವಾಗಿ ನಡೆಯುವ ಮದುವೆಗಳೇ ಹೆಚ್ಚು. ಆದರೆ, ಬಸವಣ್ಣ, ಅಂಬೇಡ್ಕರ್, ಬುದ್ಧನ ಆಶಯಗಳೊಂದಿಗೆ ಸರಳವಾಗಿ ನಡೆದ ಸಾಮೂಹಿಕ ಮದುವೆ ಮಾದರಿಯಾಗಿತ್ತು. ಸಾಲದಕ್ಕೆ ನೀತಿ ಸಂಹಿತೆಯ ನೆರಳಲ್ಲಿ ನಡೆದ ಮದುವೆ ಸರಳದಲ್ಲಿ ಸರಳವಾಗಿ ನೋಡುಗರ ಮೆಚ್ಚುಗೆಗೂ ಪಾತ್ರವಾಯ್ತು.