ರಿಯೋ ಡಿ ಜನೈರೋ: ಲೈಂಗಿಕ ದೌರ್ಜನ್ಯ-ನಾಗರಿಕ ಜಗತ್ತನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಲ್ಲಿ ಒಂದು. ಈ ಸಾಮಾಜಿಕ ಪಿಡುಗಿನ ವಿರುದ್ದ ವಿಶ್ವದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸಿನಿಮಾ ತಾರೆಯರು ಮತ್ತು ರೂಪದರ್ಶಿಯರು ಈ ದುರಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಸಾಂಬಾ ನಾಡು ಬ್ರೆಜಿಲ್ನ ರೂಪದರ್ಶಿಯರು ಲೈಂಗಿಕ ಕಿರುಕುಳದ ಬಗ್ಗೆ ಧನಿ ಎತ್ತಲು ವಿಭಿನ್ನ ಪ್ರತಿಭಟನೆ ನಡೆಸಿದರು. ತಮ್ಮ ಒನಪು-ವೈಯ್ಯಾರ ಪ್ರದರ್ಶಿಸಲು ಧರಿಸುವ ಬಿಕಿನಿಯನ್ನು ಬೀಫ್ (ದನದ ಮಾಂಸ) ವಿನ್ಯಾಸದಿಂದ ಸೃಷ್ಟಿಸಿ ಅದನ್ನು ತೊಟ್ಟು ಮಾಧ್ಯಮಕ್ಕೆ ಪೋಸು ನೀಡಿದರು.
ಈ ವಿನೂತನ ಪ್ರತಿಭಟನೆ ವಿಶೇಷ ಗಮನಸೆಳೆದರೂ, ಸಂಪದ್ರಾಯವಾದಿಗಳು ಈ ಬಗ್ಗೆ ಕಿಡಿಕಾರಿದ್ದಾರೆ. ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಲು ಇಂಥ ಉಡುಪು ಧರಿಸುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿರುವ ಅವರು, ಅಲ್ಲದೇ ಇದು ಮಾಂಸಾಹಾರಕ್ಕೂ ಪ್ರಚೋದನೆ ನೀಡುತ್ತದೆ ಎಂದು ಅಸಮಾಧಾನ ಸೂಚಿಸಿದ್ದಾರೆ. ಬ್ರೆಜಿಲ್ ರಾಜಧಾನಿ ರಿಯೋದಲ್ಲಿ ಪ್ರತಿ ವರ್ಷ ನಡೆಯುವ ಮಿಸ್ ಬುಮ್ಬುಮ್ ಸೌಂದರ್ಯ ಸ್ಪರ್ಧೆ ಜನಪ್ರಿಯತೆ ಪಡೆಯುತ್ತಿದೆ. ಸಾಮಾಜಿಕ ಕಳಕಳಿಯ ಸಂದೇಶ ಹೊತ್ತ ಈ ಸ್ಪರ್ಧೆಯು ಅಗಾಗ ವಿವಾದಗಳಿಗೂ ಕಾರಣವಾಗುತ್ತದೆ. ಪೆರುವಿನಲ್ಲಿ ಮೊನ್ನೆ ನಡೆದ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲೂ ಲಲನೆಯರು ಮಹಿಳಾ ಹಕ್ಕುಗಳ ಸಂರಕ್ಷಣೆ, ಲಿಂಗ ತಾರತಮ್ಯ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ತೀಕ್ಷ್ಣವಾಗಿ ಮಾತನಾಡಿ ಗಮನಸೆಳೆದಿದ್ದರು.