ಚಿಕ್ಕಮಗಳೂರು : ಪ್ರಪಂಚದಲ್ಲಿ ೩೦೦ ಬಿಲಿಯನ್‌ಗಿಂತಲೂ ಹೆಚ್ಚು ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಡಿ.ಟಿ ದೇವೆಂದ್ರನ್ ತಿಳಿಸಿದರು. ಶ್ರೀ ತರಳಬಾಳು ಜಗದ್ಗುರು ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಆರಕ್ಷಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತರಳಬಾಳು ಜಗದ್ಗುರು ಮಹಿಳಾ ಪ್ರಥಮ ದರ್ಜೆ ಕಾಲೇಜು, ರೋಟರಿ ಇನ್ನರ್ ವ್ಹೀಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ರಕ್ಷಣೆ ಮಾಡುವ ದೃಷ್ಠಿಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ೧೯೮೭ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ೨೦೦೭ರಲ್ಲಿ ಮೆಂಟಲ್ ಹೆಲ್ತ್‌ಕೇರ್ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಈ ಕಾಯಿದೆಯ ೧೮ ರಿಂದ ೨೨ ನೇ ಅಧ್ಯಾಯದಲ್ಲಿ ಮಾನಸಿಕ ರೋಗಿಗಳ ಹಕ್ಕು ರಕ್ಷಣೆಗಳ ಬಗ್ಗೆ ವಿವರಿಸಲಾಗಿದೆ. ೨೨ ನೇ ಅಧ್ಯಾಯವು ಉಚಿತ ಕಾನೂನು ಸೇವೆಗಳನ್ನು ಒದಗಿಸಿದೆ ಎಂದು ಹೇಳಿದ ಅವರು ಯಾವುದೇ ಆರೋಪಿಯ ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ಮಾನಸಿಕ ಅಸ್ವಸ್ಥನೆಂದು ಕಂಡುಬಂದಲ್ಲಿ ಆತ ಸ್ವಸ್ಥ ಆರೋಗ್ಯವಂತನಾಗುವವರೆಗೂ ವಿಚಾರಣೆ ಮಾಡುವಂತಿಲ್ಲ ಎಂದರು. ನಾವು ದೈಹಿಕ ಆರೋಗ್ಯಕ್ಕೆ ಕೊಡುವ ಪ್ರಾಧಾನ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು, ನಮ್ಮ ಸುತ್ತಮುತ್ತಲಿನ ಮಾನಸಿಕ ಅಸ್ವಸ್ಥರನ್ನು ಚಿಕಿತ್ಸೆಗೆ ಒಳಪಡಿಸಿ ಸಮುದಾಯದ ಆರೋಗ್ಯದ ರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧ್ಯಕ್ಷ ಎಸ್.ಜಿ ಕಿರಣ್ ಮಾತನಾಡಿ, ಸುಮಾರು ಶೇ. ೯೦ಕ್ಕಿಂತ ಹೆಚ್ಚು ಮಂದಿಗೆ ಮಾನಸಿಕ ತಿಳುವಳಿಕೆ ಮೂಲಕ ಸುಸ್ಥಿತರರನ್ನಾಗಿ ಮಾಡಬಹುದು ಇನ್ನುಳಿದಂತೆ ಚಿಕಿತ್ಸೆಗೆ ಒಳಪಡಿಸುವ ಅಗತ್ಯವಿರುತ್ತದೆ. ಕೆಲಸದ ಒತ್ತಡದಿಂದಾಗಿ ಮಾನಸಿಕ ತೊಳಲಾಟ ಉಂಟಾಗುತ್ತದೆ ಇದನ್ನು ಸರಿಯಾದ ಯೋಜನೆ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ ಯಾವುದೇ ರೀತಿಯ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕವನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿವೈಎಸ್‌ಪಿ ಶೇಖ್‌ಹುಸೇನ್ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ಮಾನಸಿಕ ಆರೋಗ್ಯ ಹೊಂದಬಹುದು, ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು, ಮಕ್ಕಳು ಮಾನಸಿಕ ಆರೋಗ್ಯದ ರಕ್ಷಣೆ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು. ರೋಟರಿ ಇನ್ನರ್ ವ್ಹೀಲ್ ಅಧ್ಯಕ್ಷೆ ಶರ್ಮಿಳಾ ಶಶಿಧರ್ ಮಾತನಾಡಿ, ವಿದ್ಯಾರ್ಥಿಗಳು ಓದುವುದರ ಕಡೆಗೆ ಗಮನಹರಿಸಬೇಕು, ವಿಷಯದ ಆಯ್ಕೆಯಲ್ಲಿ ಪೋಷಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಮಾನಸಿಕ ಆರೋಗ್ಯ ವಿಷಯದ ಕುರಿತು ಮಾಹಿತಿ ನೀಡಿದ ಡಾ.ವಿಜಯ್ ಕುಮಾರ್ ಮಾನಸಿಕ ಆರೋಗ್ಯವನ್ನು ವ್ಯಕ್ತಿಗತ, ಕೌಟುಂಬಿಕ, ಕಾರ್ಯಗತ ಮತ್ತು ಸಾಮಾಜಿಕ ಎಂದು ನಾಲ್ಕು ಬಗೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ಮಾನಸಿಕ ಒತ್ತಡವೆಂಬುದು ಇದ್ದೇ ಇರುತ್ತದೆ ಒಂದು ಹಂತದಲ್ಲಿನ ಒತ್ತಡ ಇನ್ನೊಂದು ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಜೆ ಕಾಲೇಜಿನ ಪ್ರಾಂಶುಪಾಲರಾದ ಜೆ.ಕೆ ಭಾರತಿ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ಟಿ ದುಶ್ಯಂತ್, ನ್ಯಾಯಮೂರ್ತಿಗಳಾದ ಬಸವರಾಜು ಚೇಂಗಟಿ, ಡಾ. ಚಂದ್ರಶೇಖರ್, ಎಲ್.ಡಿ ಬಸವರಾಜ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜಯಲಕ್ಷ್ಮಿ ಮತ್ತಿತರರು ಉಪಸ್ಥತರಿದ್ದರು.










