ಚಿಕ್ಕಮಗಳೂರು -ಆಜಾದ್ ಪಾರ್ಕ್ ವೃತ್ತದ ಬಳಿ ಧರಣಿ ನಡೆಸಿದ ಕಾರ್ಯಕರ್ತರು ಪ್ರತ್ಯೇಕತೆಯ ಕೂಗನ್ನು ಹತ್ತಿಕ್ಕುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ ಹಲವರ ತ್ಯಾಗ ಮತ್ತು ಬಲಿದಾನದಿಂದ ರೂಪುಗೊಂಡಿರುವ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಒಡೆಯಬಾರದು, ಏಕೀಕರಣದ ಆಶಯಗಳನ್ನು ಹಾಳುಗೆಡವಬಾರದು ಎಂದರು.
ಪ್ರತ್ಯೇಕತೆಯ ಕೂಗಿನ ಮುಖಾಂತರ ರಾಜ್ಯವನ್ನು ತೆಲಂಗಾಣ ಮಾಡಲು ಪಟ್ಟಬದ್ದ ಹಿತಾಸಕ್ತಿಗಳು ಮುಂದಾಗಿದ್ದು ಇದಕ್ಕೆ ಕರವೇ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ, ರಾಜ್ಯವನ್ನು ಒಡೆಯಲು ಮುಂದಾದರೆ ಜನತೆ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.
ಪ್ರತ್ಯೇಕತೆಯ ಕೂಗನ್ನು ನಿಲ್ಲಿಸುವ ನಿಟ್ಟಿನಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ದಿಗಾಗಿ ಡಾ|| ಡಿ.ಎಂ.ನಂಜುಂಡಪ್ಪ ಅವರ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಜಾರಿಗೊಳಿಸಬೇಕು, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿ ಮಾಡಬೇಕು ಎಂದು ಸಲಹೆ ಮಾಡಿದರು.
ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ ಕನ್ನಡಿಗರ ಏಕತೆಯನ್ನು ಒಡೆಯಲು ರಾಜಕಾರಣಿಗಳು ಮತ್ತು ಪಟ್ಟಬದ್ದ ಹಿತಾಸಕ್ತಿಗಳು ಕುತಂತ್ರ ನಡೆಸಿದ್ದಾರೆ ಪ್ರತ್ಯೇಕತೆಯ ಕೂಗಿನ ಮೂಲಕ ದೇಶದ ಸಾರ್ವಭೌಮತೆ, ಅಖಂಡತೆ ಮತ್ತು ಸಮಗ್ರತೆಯನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ತಾಲ್ಲೂಕು ಉಪಾಧ್ಯಕ್ಷ ಕುಮಾರ್ ಆರ್.ಶೆಟ್ಟಿ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ನಾಗಲತ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ರೈತ ಸಂಘದ ಮುಖಂಡ ಗುರುಶಾಂತಪ್ಪ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Home ಸ್ಥಳಿಯ ಸುದ್ದಿ ಪ್ರತ್ಯೇಕ ರಾಜ್ಯದ ಕೂಗನ್ನು ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.