ಬೆಂಗಳೂರು: ಅಂಗಡಿಗೆ ಹೋಗಿ ಕಾಂಡೋಂ ಖರೀದಿಸಲು ಸಂಕೋಚ ಪಟ್ಟುಕೊಳ್ಳುವ ದೇಶದ ಜನರು ಆನ್ಲೈನ್ ಮೂಲಕ ಉಚಿತವಾಗಿ ಸಿಗುವ ಕಾಂಡೋಂ ಖರೀದಿಗೆ ಮುಗಿಬಿದ್ದಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಇ-ಮೇಲ್ ಅಥವಾ ಫೋನ್ ಮೂಲಕ ಆರ್ಡರ್ ಮಾಡಿದವರ ಮನೆ ಬಾಗಿಲಿಗೇ ಉಚಿತವಾಗಿ ಕಾಂಡೋಂ ತಲುಪಿಸುವ ‘ಫ್ರೀ ಕಾಂಡೋಂ ಸ್ಟೋರ್’ ಸೇವೆ ದೇಶದಲ್ಲಿ ಆರಂಭವಾದ ಕೇವಲ 69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಂಗಳು ಖಾಲಿಯಾಗಿವೆ!
ಏಡ್ಸ್ ಹೆಲ್ತ್ಕೇರ್ -ಫೌಂಡೇಷನ್ ಏ.28ರಂದು ಫ್ರೀ ಕಾಂಡೋಂ ಸ್ಟೋರ್ ಆರಂಭಿಸಿತ್ತು. ಹಿಂದುಸ್ತಾನ್ ಲೇಟೆಕ್ಸ್ ಕಂಪನಿಯಿಂದ 10 ಲಕ್ಷ ಕಾಂಡೋಂಗಳ ಸರಕು ತರಿಸಿಕೊಂಡಿತ್ತು. ಭಾರತದಲ್ಲಿ ಜನರು ಕಾಂಡೋಂ ಖರೀದಿಸಲು ಹಿಂದೇಟು ಹಾಕುವ ಕಾರಣಕ್ಕೆ ವರ್ಷಾಂತ್ಯದವರೆಗೂ ಈ ಸರಕು ಸಾಕಾಗಬಹುದು ಎಂದು ಫೌಂಡೇಷನ್ ಅಂದಾಜಿಸಿತ್ತು. ಆದರೆ ಕೇವಲ 69 ದಿನಗಳಲ್ಲಿ 9.56 ಲಕ್ಷ ಕಾಂಡೋಂಗಳು ಬಿಕರಿಯಾಗಿವೆ.
ಈ ಪೈಕಿ 5.14ಲಕ್ಷ ಕಾಂಡೋಂಗಳನ್ನು ಸಮುದಾಯ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಖರೀದಿಸಿದ್ದರೆ, ಉಳಿದ 4.41 ಲಕ್ಷ ಕಾಂಡೋಂಗಳನ್ನು ಜನರು ತಮ್ಮ ಮನೆಗೆ ತರಿಸಿಕೊಂಡಿದ್ದಾರೆ. ಈ ಪೈಕಿ ಅತಿ ಹೆಚ್ಚು ಬೇಡಿಕೆ ದೆಹಲಿಯಿಂದ ವ್ಯಕ್ತವಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಅಂಗಡಿಗೆ ಹೋಗಿ ಕಾಂಡೋಂ ಕೇಳಲು ಭಾರತೀಯರು ಮುಜುಗರ ಅನುಭವಿಸುತ್ತಾರೆ. ಆದರೆ ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ, ಯಾರಿಗೂ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.
ಖರೀದಿಯಲ್ಲಿ ಕರ್ನಾಟಕ ನಂ.2
ಕುಟುಂಬ ಕಲ್ಯಾಣಕ್ಕೆ ಅತ್ಯಂತ ಅಗ್ಗದ ವಿಧಾನ ಕಾಂಡೋಂ. ಲೈಂಗಿಕವಾಗಿ ಹರಡುವ ರೋಗಗಳಿಂದಲೂ ಜನರನ್ನು ಇದು ರಕ್ಷಿಸುತ್ತದೆ. ಆದರೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ ಕೇವಲ ಶೇ.5.6 ಮಂದಿಯಷ್ಟೇ ದೇಶದಲ್ಲಿ ಕಾಂಡೋಂ ಬಳಸುತ್ತಾರೆ. ಪ್ರಗತಿಪರ ರಾಜ್ಯವಾದ ಕರ್ನಾಟಕದಲ್ಲಿ ಈ ಪ್ರಮಾಣ ಕೇವಲ ಶೇ.1.7ರಷ್ಟಿದೆ. ಬೆಂಗಳೂರಿನಲ್ಲಿ ಶೇ.3.6ರಷ್ಟು ಮಂದಿ ಕಾಂಡೋಂ ಬಳಕೆ ಮಾಡುತ್ತಾರೆ. ಆದರೆ ಕೋಲ್ಕತಾ (ಶೇ.19) ಹಾಗೂ ದೆಹಲಿ (ಶೇ.10) ಗೆ ಹೋಲಿಸಿದರೆ ಬೆಂಗಳೂರು ಹಿಂದಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.