ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ : ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಗೆ ಸಿದ್ಧತೆ

788

ದಕ್ಷಿಣ ಕನ್ನಡ : ಪ್ರಧಾನಿ ನರೇಂದ್ರ ಮೋದಿ ಇದೇ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಭದ್ರತೆಗೆ ಸಿದ್ಧತೆ ನಡೆಸುತ್ತಿದೆ. ಪಶ್ಚಿಮಘಟ್ಟದ ತಪ್ಪಲುಗಳಲ್ಲಿ ನಕ್ಸಲ್‌ ನಿಗ್ರಹ ಪಡೆ ಕೂಂಬಿಂಗ್‌ಸಿದ್ಧತೆ ನಡೆಸಿದೆ. ಪಶ್ಚಿಮಘಟ್ಟದ  ತಪ್ಪಲು  ಪ್ರದೇಶಗಳಾದ  ಬೆಳ್ತಂಗಡಿ-ಕಾರ್ಕಳ ವ್ಯಾಪ್ತಿಯಲ್ಲಿ ನಕ್ಸಲ್‌ ಚಟುವಟಿಕೆಯಿರುವ ಕಾರಣ ಈ ಪ್ರದೇಶದ ಮೇಲೆ ಹೆಚ್ಚಿನ ನಿಗಾ ಇಟ್ಟು ನಕ್ಸಲ್‌ ಕೂಂಬಿಂಗ್‌ಗೆ ಸಿದ್ಧತೆ ಮಾಡಲಾಗಿದೆ. ಈಗಾಗಲೇ ಒಂದು ನಕ್ಸಲ್‌ ನಿಗ್ರಹ ದಳ ತುಕಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈಗ ಹೆಚ್ಚುವರಿಯಾಗಿ ಎಎನ್‌ಎಫ್‌ ತಂಡಗಳನ್ನು ಕೇಂದ್ರ ಸ್ಥಾನ ಕಾರ್ಕಳದಿಂದ ತರಿಸಿಕೊಳ್ಳಲು ಸಿದ್ಧತೆ ಮಾಡಲಾಗಿದೆ. ಭದ್ರತಾ ವ್ಯವಸ್ಥೆಗೆ ಸಕಲ ರೀತಿಯಲ್ಲಿ ಸನ್ನದ್ಧರಾಗುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಎಲ್ಲ ಠಾಣಾ ವ್ಯಾಪ್ತಿಯ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಬಾಂಬು ಪತ್ತೆ ಹಚ್ಚುವ ತಂಡ ತಂಡ ಈಗಾಗಲೇ ಹೆಲಿಪ್ಯಾಡ್‌, ಉಜಿರೆ, ಧರ್ಮಸ್ಥಳ ಸುತ್ತಮುತ್ತ ತಪಾಸಣೆ ನಡೆಸಿದೆ. ಅಲ್ಲದೆ ತಪಾಸಣೆ ನಡೆಸಿದ ಸ್ಥಳಗಳಲ್ಲಿ ನಿಗಾ ಇಡಲು ಸಿಬ್ಬಂದಿ ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ. ಆ.29ರಂದು ಉಜಿರೆಯಲ್ಲಿ ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗೆ ಸದ್ಯ 2500 ಪೊಲೀಸರು, 150 ಕ್ಕೂ ಅಧಿಕ ಅಧಿಕಾರಿಗಳ ಯೋಜನೆ ರೂಪಿಸಲಾಗಿದೆ.

ಕಾರ್ಯಕ್ರಮದ ರೂಪುರೇಷೆ ಹಾಗೂ ಬಾಕಿ ಸಿದ್ಧತೆಗಳನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ಪಶ್ಚಿಮ ವಲಯ ಹೊರತುಪಡಿಸಿ ಉಳಿದ ವಲಯಗಳಿಂದಲೂ ಸಿಬ್ಬಂದಿ ತರಿಸಿಕೊಳ್ಳಲಾಗುವುದು ಎಂದು ಎಸ್ಪಿಯವರು ಹೇಳಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಲ್ಲಿ ಕೂಂಬಿಂಗ್‌ ನಡೆಸಲು ಎಎನ್‌ಎಫ್‌ ಸಿದ್ಧವಾಗಿದೆ. ಮೇಲಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಆದೇಶ ಬಂದ ಕಾರ್ಯಾಚರಣೆ ಆರಂಭಿಸಲಾಗುವುದು. ಒಂದು ಟೀಮ್‌ನಲ್ಲಿ ತಲಾ 12 ಸದಸ್ಯರಿದ್ದು, ಸುಮಾರು 4ರಿಂದ 6 ತಂಡಗಳು ನಾನಾ ಕಡೆಗಳಲ್ಲಿ ಕೂಂಬಿಂಗ್‌ ನಡೆಸಲಿದೆ.

LEAVE A REPLY

Please enter your comment!
Please enter your name here