ಬೆಳೆ ಸಮೀಕ್ಷೆ ದಾಖಲೆಗಳ ಗಣಕೀಕರಣವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ: ರಾಜೀವ್ ಚಾವ್ಲಾ

630

ಹಾಸನ : ಎಲ್ಲಾ ಜಿಲ್ಲೆಗಳಲ್ಲೂ ಬೆಳೆ ಸಮೀಕ್ಷೆ ದಾಖಲೆಗಳ ಗಣಕೀಕರಣವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಇ.ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು ಇದೊಂದು ಮಹತ್ವವಾದ ಉದ್ದೇಶಿತ ಕಾರ್ಯಕ್ರಮವಾಗಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಬ್ಲಾಕ್‍ವಾರು ಬೆಳೆ ವಿವರ ದತ್ತಾಂಶಗಳನ್ನು ತಂತ್ರಾಂಶಗಳ ನೆರವಿನಿಂದ ದಾಖಲಿಸುವಂತೆ ಸೂಚನೆ ನೀಡಿದರು.

ನವೆಂಬರ್ 10 ರೊಳಗಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳೆ ಸಮೀಕ್ಷೆ ದಾಖಲೆಗಳ ಗಣಕೀಕರಣವನ್ನು ಶೇಕಡಾ 75 ರಷ್ಟು ಪೂರ್ಣಗೊಳಿಸುವಂತೆ ಅವರು ನಿರ್ದೇ ಶನ ನೀಡಿದರು. ವೀಡಿಯೊ ಕಾನ್ಫರೆನ್ಸ್‍ನಲ್ಲಿ ಕಂದಾಯ ಮತ್ತು ಸರ್ವೇ ಇಲಾಖೆಯ ನಿರ್ದೇಶಕರಾದ ಮೊನಿಶ್ ಮೊದ್ಗಿಲ್ ಮತ್ತು ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಅತಿಖ್ ಅವರು ಕೂಡ ಸಲಹೆಗಳನ್ನು ನೀಡಿದರು.

ಹಾಸನ ಜಿಲ್ಲೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ಬಗ್ಗೆ ಎಲ್ಲಾ ತಾಲ್ಲ್ಲೂಕುಗಳ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಲ್ಲರೂ ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ. ಬಹು ಬೇಗನೆ ಇದನ್ನು ಮುಕ್ತಾಯಗೊಳಿಸಲಾಗುವುದು ಎಂದರು. ವೀಡಿಯೊ ಕಾನ್ಫರೆನ್ಸ್ ನಂತರ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಅವರು ಎಲ್ಲಾ ಕಂದಾಯ ಅಧಿಕಾರಿ, ಸಿಬ್ಬಂದಿ ಪ್ರತಿ ದಿನವೂ 100 ಪ್ಲಾಟ್‍ಗಳನ್ನು ಕಡ್ಡಾಯವಾಗಿ ಮುಗಿಸಬೇಕು ಹಾಗೂ ಇಂದಿನಿಂದ ಪ್ರತಿ ದಿನವೂ ಸಂಜೆ 8 ಗಂಟೆಗೆ ವೀಡಿಯೋ ಕಾನ್ಫರೆನ್ಸ್‍ನಲ್ಲಿ ತಾಲ್ಲೂಕುಗಳ ತಹಸೀಲ್ದಾರ್, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಹಾಜರಿರುವಂತೆ ನಿರ್ದೇಶನ ನೀಡಿದರು.

ಕೆಲಸ ನಿರ್ವಹಿಸಲು ಹಿಂದೆ ಸರಿಯುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಜಾರ್ಚ್‍ಶೀಟ್ ನೀಡುವುದಾಗಿ ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ವಜಾ ಮಾಡುವುದಾಗಿ ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು.

LEAVE A REPLY

Please enter your comment!
Please enter your name here