• ರಾಘವೇಂದ್ರ ಕೆಸವಳಲು
ನಿನ್ನೆ ಪೇಟೆ ಬದಿಯಲ್ಲಿ ಹಾದು ಹೋಗುತ್ತಿದ್ದಾಗ ಸಾಲು ಸಾಲಾಗಿ ಅನಾವರಣಗೊಳ್ಳುತ್ತಿದ್ದ ಪಟಾಕಿ ಅಂಗಡಿಗಳು ಕಣ್ಣಿಗೆ ಬಿದ್ದವು .ಓಹ್ ! ದೀಪಾವಳಿಯಲ್ವಾ ಇನ್ನೇನು ದೀಪ, ಪಟಾಕಿಗಳದ್ದೇ ಕಾರುಬಾರು ಅಂದುಕೊಂಡೆ. ನನಗೇ ಅರಿವಿಲ್ಲದೇ ಎದೆಯಲ್ಲಿ ಸಣ್ಣದಾದರೂ ತೀಕ್ಷ್ಣವಾದ ನೋವೊಂದು ಮಿಂಚಿ ಮರೆಯಾಯಿತು. ಅದು ನನ್ನಪ್ಪನ ನೆನಪು. ತೊಂಭತ್ತರ ದಶಕಗಳ ಬಾಲ್ಯದ ಜೊತೆಗೆ ಅಪ್ಪನ ಸಮಚಿತ್ತದ ಮುಖ ಮತ್ತೆ ಕಾಡಿತು. ಆಗೆಲ್ಲಾ ದೀಪಾವಳಿ ಎಂದರೆ ಇನ್ನಿಲ್ಲದ ಸಂಭ್ರಮ ಇಂದಿನ ತರಹೇವಾರಿ ಪಟಾಕಿಗಳು, ಬಣ್ಣದ ದೀಪಗಳು ಖಂಡಿತಾ ಆ ಸುಂದರ ಘಳಿಗೆಗಳನ್ನು ತಂದುಕೊಡಲು ಸಾಧ್ಯವಿಲ್ಲ. ಪ್ರತಿ ದೀಪಾವಳಿಯ ಹಿಂದಿನ ದಿನ ಅಪ್ಪ ಪೇಟೆಯಿಂದ ಊರಿಗೆ ಬರುತ್ತಿದ್ದ ಬಸ್ಸಿನ ಬರುವಿಕೆಗಾಗಿ ಮನೆಯ ಮೆಟ್ಟಿಲ ಮೇಲೆ ಕಾತುರದಿಂದ ಕಾದಿರುತ್ತಿದ್ದೆ.ಬಸ್ಸು ಪೇಟೆಯಿಂದ ಊರು ತಲುಪಲು ೧೫ ನಿಮಿಷ ತೆಗೆದುಕೊಂಡರೆ ನಾನು ಅಮ್ಮನನ್ನು ನೂರು ಬಾರಿ ಅಪ್ಪ ಎಷ್ಟು ಹೊತ್ತಿಗೆ ಬರುತ್ತಾರೆ ಎಂಬ ಪ್ರೆಶ್ನೆಯೊಂದಿಗೆ ಕಾಡಿಸುತ್ತಾ, ಅಪ್ಪ ಬಂದೊಡನೆ ಓಡಿ ಹೋಗಿ ಪಟಾಕಿ ಚೀಲವನ್ನು ಹೊತ್ತು ತಂದು ಹರಡಿಕೊಂಡು ನೋಡಿ ಪಟಾಕಿ ಸಾಲದು ಎಂದು ಅತ್ತು ಕರೆದು ರಂಪ ಮಾಡಿ ಪುನಃ ಅಪ್ಪ ಬಂದ ಬಸ್ಸಿಗೆ ತಿರುಗಿ ಪೇಟೆಗೆ ಹೋಗಿ ಮತ್ತಷ್ಟು ಪಟಾಕಿ ತಂದು ಕೊಟ್ಟ ಮೇಲಷ್ಟೇ ಸಮಾಧಾನಗೊಳ್ಳುತ್ತಿದ್ದುದು.

ಕಷ್ಟ ಸಹಿಷ್ಣುವಾಗಿದ್ದ ಅಪ್ಪ ತನ್ನ ಆರ್ಥಿಕ ಸಮಸ್ಯೆಯನ್ನು ಎಂದೂ ನಮ್ಮ ಮುಂದೆ ವ್ಯಕ್ತಪಡಿಸಿದ್ದಿಲ್ಲ. ಮಲೆನಾಡಿನ ರೈತರು ತಮ್ಮೆಲ್ಲ ಖರ್ಚುಗಳಿಗೂ ವರ್ಷದಾಯವನ್ನು ನೀಡುತ್ತಿದ್ದ ಕಾಫಿ ಬೆಳೆಯನ್ನೇ ನೆಚ್ಚಿಕೊಂಡಿರುತ್ತಿದ್ದ ಕಾಲವದು. ಅಕ್ಟೊಬರ್ ನವೆಂಬರ್ ತಿಂಗಳು ಬಂತೆಂದರೆ ಹಣಕ್ಕೆ ಇನ್ನಿಲ್ಲದ ಮುಗ್ಗಟ್ಟು ಮುಂದೆ ಡಿಸಂಬರ್ ನಂತರ ಕಾಫಿ ಬೆಳೆಯ ಆದಾಯವನ್ನು ನಿರೀಕ್ಷಿಸುತ್ತಿದ್ದ ದಿನಗಳವು . ಈ ಕಷ್ಟದ ಪರಿಸ್ಥಿತಿ ಯಲ್ಲಿ ಕಾಫಿ ಬೆಳೆಗಾರರಿಗೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡುತ್ತಿದ್ದುದು ಪರ್ಯಾಯ ಬೆಳೆಯಾದ ಏಲಕ್ಕಿ ಬೆಳೆ. ಮೋಡಕವಿದಂತಿದ್ದ ದೀಪಾವಳಿ ಪೂರ್ವ ಮಾಸಗಳಲ್ಲಿ ಕೊಯ್ದ ಏಲಕ್ಕಿಯನ್ನು ತಂದು ಅಂಗಳದಲ್ಲಿ ಒಣಗಿಸುವಾಗ ಮಕ್ಕಳಾದ ನಾವೇ ಅದಕ್ಕೆಕಾವಲುಗಾರರು. ಏಕೆಂದರೆ ಏಲಕ್ಕಿ ಬೆಳೆ ಮಾರಿದರಷ್ಟೇ ನಮ್ಮ ಅಂದಿನ ದೀಪಾವಳಿ ವಿಜೃಂಭಣೆಯಿಂದ ಆಚರಣೆಯಾಗುತ್ತಿದ್ದುದು.
ಸರಳ ಜೀವಿಯಾದ ಅಪ್ಪ ಎಷ್ಟೇ ಕಷ್ಟಗಳಿದ್ದರೂ ಎಂದು ಕೂಡ ಮನೆಯ ಆಚರಣೆಗಳಲ್ಲಿ ಕುಂದಾಗದಂತೆ ನೋಡಿಕೊಳ್ಳುತ್ತಿದ್ದರು .ಇವೆಲ್ಲಾ ಕಾರ್ಯಗತವಾಗುತ್ತಿದ್ದುದು ಅಮ್ಮನ ನುರಿತ ಕೈಗಳಲ್ಲಿ .ಇಂದೂ ದೀಪಾವಳಿಯೆಂದ ಕೂಡಲೇ ಅಪ್ಪನ ನೆನಪು ಇನ್ನಿಲ್ಲದಂತೆ ಕಾಡಲಾರಂಭಿಸುತ್ತದೆ. ಅಂದಿನಂತೆ ಯಾವುದೇ ಆರ್ಥಿಕ ಮುಗ್ಗಟ್ಟಿಲ್ಲದ್ದೆ ಇಂದು ಬೇಕಾದ್ದನ್ನೆಲ್ಲ ಖರೀದಿಸಿ ಬಹಳ ವಿಜೃಂಭಣೆಯಿಂದ ದೀಪಾವಳಿ ಆಚರಿಸಬಹುದು. ಆದರೆ ಅಪ್ಪ ತನ್ನೆಲ್ಲಾ ನೋವನ್ನು ಎದೆಯೊಳಗೆ ಬಚ್ಚಿಟ್ಟು ಮಕ್ಕಳ ಮುಖದ ಮೇಲೆ ಮೂಡುವ ಸಂತಸದಲ್ಲೇ ಸಾರ್ಥಕತೆ ಕಾಣುತ್ತಿದ್ದುದು ಮತ್ತೆ ಮರುಕಳಿಸಲು ಸಾಧ್ಯವಿಲ್ಲ.
ಅಪ್ಪನಿಲ್ಲದ ದೀಪಾವಳಿ, ಅಂದು ಅಪ್ಪ ತರುತ್ತಿದ್ದ ಪಟಾಕಿಗಾಗಿ ಕಾದಿರುತ್ತಿದ್ದ ಮನೆಯ ಮೆಟ್ಟಿಲು ಎಲ್ಲವೂ ಬಹಳವಾಗಿ ನನ್ನನ್ನು ಕಾಡುತ್ತವೆ. ಜೀವಮಾನ ಪೂರ್ತಿ ಕುಟುಂಬದ ಹಿತಕ್ಕಾಗಿ ದುಡಿದ ಅಪ್ಪನ ಅಪಾರ ತಾಳ್ಮೆ ,ಬದುಕಿನ ಅನುಭವ ,ಕಷ್ಟ ಸಹಿಷ್ಣುತೆ , ಸರಳ ಜೀವನದ ಪಾಠ, ಪರರನ್ನು ಗೌರವದಿಂದ ಕಾಣುತ್ತಿದ್ದ ಗುಣ ಇವುಗಳೇ ನನ್ನ ಬದುಕಿನುದ್ದಕ್ಕೂ ಬರುವ ದೀಪಾವಳಿಯ ದೀವಿಗೆ .ಮನಸ್ಸಿನ ಕಂದೀಲು ಬೆಳಗಿಸಲು ನೂರು ದೀಪಗಳಿಗೆ ಮಿಗಿಲಾದ ಅಪ್ಪನ ನೆನಪುಗಳಷ್ಟೇ ಸಶಕ್ತ.










