ಚಿಕ್ಕಮಗಳೂರು – ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ವೆಬ್‍ಸೈಟ್ ಗಳನ್ನು ಆಗಾಗ ಅಪ್‍ಡೇಟ್ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರನ್ನು ಗುರುವಾರ ಭೇಟಿ ಮಾಡಿದ ಸಂಘಟನೆಗಳ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರದ ಹಲವಾರು ಯೋಜನೆಗಳಿವೆ, ಆದರೆ ಅವುಗಳ ಮಾಹಿತಿ ಸಾರ್ವಜನಿಕರಿಗೆ ಸರಿಯಾಗಿ ತಲುಪುತ್ತಿಲ್ಲ, ಯಾವುದೇ ಇಲಾಖೆಗೆ ಸಾರ್ವಜನಿಕರು ದೂರು ಸಲ್ಲಿಸಿದರೆ ಅದಕ್ಕೆ ಸ್ವೀಕೃತಿ ಪತ್ರ ದೊರೆಯುತ್ತಿಲ್ಲ, ಮಾಹಿತಿಗಾಗಿ ಇಲಾಖೆ ದೂರವಾಣಿಗೆ ಕರೆ ಮಾಡಿದರೆ ಅದನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳ ಜಾಲತಾಣವನ್ನು ಆಗಾಗ ಪರಿಷ್ಕರಣೆ ಮಾಡಬೇಕು, ಇಲಾಖೆಗಳ ವೆಬ್‍ಸೈಟ್‍ನಲ್ಲಿ ಜನಸಾಮಾನ್ಯರಿಗೆ ಸಿಗುವ ಸೌಲಭ್ಯಗಳನ್ನು ಮತ್ತು ಅದರ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು, ಇಲಾಖೆಗಳ ಸೂಚನಾ ಫಲಕದಲ್ಲಿ ಅಧಿಕಾರಿಗಳ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಆಗ್ರಹಿಸಿದರು.ಸಾರ್ವಜನಿಕರು ತಮ್ಮ ದೂರನ್ನು ಸಂಬಂಧಪಟ್ಟ ಇಲಾಖೆಯ ಜಾಲತಾಣಕ್ಕೆ ಸಲ್ಲಿಸುವ ಮತ್ತು ಅದರ ಸ್ವೀಕೃತಿಯನ್ನು ಇ-ಮೇಲ್‍ನಲ್ಲೇ ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಅಧ್ಯಕ್ಷ ಮೊಹಿದ್ದೀನ್ ಇಕ್ಬಾಲ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಚಂದ್ರಪ್ಪ, ದಲಿತ್ ಜನಸೇನಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜೆ.ಸತ್ಯನಾರಾಯಣ, ಅಮೀರ್, ರಮೇಶ್, ಕೀರ್ತಿ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು ಇಲಾಖೆಗಳ ವೆಬ್‍ಸೈಟ್ ಗಳನ್ನು ಆಗಾಗ ಅಪ್‍ಡೇಟ್ ಮಾಡುವಂತೆ ವಿವಿಧ ಸಂಘಟನೆಗಳ ಮುಖಂಡರಿಂದ ಮನವಿ.










