ಕೊಲೊಂಬೊ/ಲಂಡನ್: ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಲಂಕಾದ 60ಕ್ಕೂ ಹೆಚ್ಚು ತಮಿಳರು ಆರೋಪಿಸಿದ್ದಾರೆ. ಶ್ರೀಲಂಕಾದಲ್ಲಿ ಮತ್ತೆ ಅಂತರ್ಯುದ್ಧ ಭುಗಿಲೇಳುವ ಲಕ್ಷಣಗಳು ಗೋಚರಿಸತೊಡಗಿವೆ. ಈ ಕುರಿತು ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ಶ್ರೀಲಂಕಾದಲ್ಲಿ ಅಂತರ್ಯದ್ಧ ಮುಕ್ತಾಯಗೊಂಡ ಹಲವು ವರ್ಷಗಳ ಬಳಿಕ ಭದ್ರತಾಪಡೆಯಿಂದ ತಮಿಳು ನಾಗರಿಕರ ಮೇಲೆ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಗ್ನ ದೇಹದ ಮೇಲೆ ಬರೆ ಹಾಕಿ ವಿವಿಧ ರೀತಿಯ ಚಿತ್ರಹಿಂಸೆಗಳನ್ನು ನೀಡಲಾಗಿದೆ ಎಂದು ತಮಿಳರು ನೀಡಿರುವ ಹೇಳಿಕೆಗಳನ್ನು ಚಿತ್ರ ಸಹಿತ ಲಂಡನ್ನ ಅಸೋಸಿಯೇಟೆಡ್ ಪ್ರೆಸ್ ನಿನ್ನೆ ಪ್ರಕಟಿಸಿದೆ. ಈ ಘಟನೆಯಿಂದ ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದಲ್ಲಿ ವ್ಯಾಪಕ ಆಕ್ರೋಶ ಉಲ್ಬಣಗೊಂಡಿದೆ. ಯೋಧರು ಮತ್ತು ಪೊಲೀಸರ ವಿರುದ್ಧ ತಮಿಳು ಪ್ರತೀಕಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ದ್ವೀಪರಾಷ್ಟ್ರದಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ. ತಮಿಳರ ಮೇಲೆ ನಡೆದಿದೆ ಎನ್ನಲಾದ ಹಿಂಸಾಕೃತ್ಯಗಳನ್ನು ಸರ್ಕಾರ ಖಂಡಿಸುವುದಾಗಿ ಹೇಳಿರುವ ಶ್ರೀಲಂಕಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಘಟನೆಗಳ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.