ಚಿಕ್ಕಮಗಳೂರು: ನಗರದ ಕೋಟೆ ಬಡಾವಣೆಯ ಜನತೆ ದೀಪಾವಳಿ ಹಬ್ಬದ ಅಂಗವಾಗಿ ಲಕ್ಕೆ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ರೈತರು ತಮ್ಮ ಹೊಲ, ಗದ್ದೆಗಳಲ್ಲಿ ಭೂಮಿ ಪೂಜೆ ನೆರವೇರಿಸಿದ ನಂತರ ಕಣದಾಳು ರಸ್ತೆಯಿಂದ ಬೇಲೂರು ರಸ್ತೆಯ ಹಳೇ ಪೋಸ್ಟ್ ಆಫೀಸ್ ಸರ್ಕಲ್‍ನಲ್ಲಿ ಹಿಂದಿನ ದಿನವೇ ರಾಶಿ ಹಾಕಲಾದ ಭತ್ತ, ರಾಗಿ, ಕಬ್ಬು, ಕಲ್ಡ ಹುಲ್ಲು, ಇನ್ನಿತರೆ ಉತ್ಪನ್ನಗಳನ್ನು ಅವರೆ ಬಳ್ಳಿಯಲ್ಲಿ ಹೊರೆ ಕಟ್ಟಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಗ್ರಾಮ ದೇವತೆಗಳಾದ ಉಗ್ರಾಣಮ್ಮ, ಕೊಲ್ಲಾಪುರದಮ್ಮ, ವೀರ ಭದ್ರೇಶ್ವರ, ಆಂಜನೇಯ ಹಾಗೂ ಭೂತಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ವರ್ಷಗಳ ಹಿಂದೆಯೇ ಇಲ್ಲಿ ನಿರ್ಮಿಸಲಾಗಿರುವ ರೈತ ಲಾಂಛನ ಸುಗ್ಗಿಕಲ್ಲಿಗೆ ಪ್ರದಕ್ಷಿಣೆ ಹಾಕಿ, ನಂತರ ಹೊರೆಗಳಿಗೆ ಲಕ್ಕೆ ಸೊಪ್ಪು, ಸೂರ್ಯಕಾಂತಿ ಗಿಡಗಳಿಂದ ಸಿಂಗರಿಸಿ ಪೂಜೆ ನೆರವೇರಿಸಿದ ಮೇಲೆ ಎಲ್ಲರ ಮನೆಗಳಲ್ಲಿ ಹಬ್ಬದ ಆಚರಣೆ ಆರಂಭವಾಗುತ್ತದೆ.
ಮನೆ ಬಾಗಿಲಿಗೆ ಬಣ್ಣ ಬಣ್ಣದ ರಂಗೋಲೆ ಬಿಡಿಸಿ, ಸಗಣಿಯಿಂದ ಮಾಡಿದ ಉಂಡೆಗಳ ಮೇಲೆ ಮಣ್ಣಿನ ಹಣತೆಗಳನ್ನು ಹಚ್ಚಿ ಭೂಮಿ ಪೂಜೆಗಿಡಲಾದ ಹೊರೆಯಲ್ಲಿರುವ ಕೃಷಿ ಉತ್ಪನ್ನಗಳನ್ನು ಸಾಂಕೇತಿಕವಾಗಿ ಎಲ್ಲರ ಮನೆಯ ಮೇಲೆ ಹಾಕಲಾಗುತ್ತದೆ. ವರ್ಷ ಪೂರ್ತಿ ಉತ್ತಮ ಮಳೆ, ಬೆಳೆ ಹಾಗೂ ದನ, ಕರು, ರಾಸುಗಳಿಗೆ ಇದರಿಂದ ಸೌಖ್ಯವಾಗುತ್ತದೆ ಎಂಬುದು ಈ ಆಚರಣೆಗಳ ಹಿಂದಿರುವ ನಂಬಿಕೆ.
ಇದಾದ ನಂತರ ಉಪವಾಸ ಆರಂಭಿಸುವ ಜನರು ಮಲ್ಲೇನ ಹಳ್ಳಿ ಬಿಂಡಿಗ ಶ್ರೀ ದೇವೀರಮ್ಮನವರ ಬೆಟ್ಟಕ್ಕೆ ತೆರಳಿ ಹರಕೆ ಒಪ್ಪಿಸಿಬರುವುದು ಇಲ್ಲಿನ ಸಂಪ್ರದಾಯ. ಬೆಟ್ಟ ಹತ್ತಲಾಗದವರು ಸಂಜೆ ಬೆಟ್ಟದ ಮೇಲೆ ಕಾಣಿಸುವ ದೀಪವನ್ನು ನೋಡಿ, ಆರತಿ ಬೆಳಗಿ ಉಪವಾಸ ಬಿಡುತ್ತಾರೆ. ಈರೀತಿಯ ಆಚರಣೆ ಕೋಟೆ ಬಡಾವಣೆ ಸೇರಿದಂತೆ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲೂ ನಡೆಯುತ್ತದೆ. ಕೋಟೆ ರಂಗನಾಥ್ ಸಮ್ಮುಖದಲ್ಲಿ ಎಸ್.ಮಲ್ಲಿಕಾರ್ಜುನ್, ವಿನಯ್ ನಾಯ್ಡು, ಹೇಮಂತ್, ಕುಮಾರ್, ಸುರೇಶ್ ಇತರರು ಇದ್ದರು.