- ಡಾ.ಎಂ.ಎಸ್.ಮಣಿ
ಅದು ಆಗಸ್ಟ್ ೧೫. ಸ್ವಾತಂತ್ರ್ಯ ದೊರೆತ ದಿನ. ವಕೀಲ ರಾಘವೇಂದ್ರ ಅವರೊಡನೆ ೭ ದಶಕಗಳಲ್ಲಿ ನಾವುಗಳು ಸಾಗಿಬಂದ ಹಾದಿಯನ್ನು ಮೆಲುಕು ಹಾಕುತ್ತಿದ್ದೆವು. ನಮ್ಮಮಾತು-ಕತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತಿಬಂತು. ಮಾತಿನ ಮಧ್ಯೆದಲ್ಲಿ ಗೋವಿನ ಹೆಸರಲ್ಲಿ ನರಮೇಧ ನಡೆಯುತ್ತಿದೆ. ಜನ ಅಭದ್ರತೆ, ಭಯ, ಆತಂಕದಿಂದ ಬದುಕು ದೂಡುವ ಸ್ಥಿತಿ ನಿರ್ಮಾಣವಾಯಿತಲ್ಲ ಎಂಬ ವಿಚಾರವೂ ಬಂದಿತು. ನಾನಾಗ ಗೋವು ಕಾಮಧೇನು. ಅದರ ಹಾಲು, ಗಂಜಲ, ಸಗಣಿ ಎಲ್ಲವೂ ಬಳಕೆಗೆ ಯೋಗ್ಯ. ಸಾಲದಕ್ಕೆ ಹಿಂದುಳಿದ ಗೊಲ್ಲ ಸಮುದಾಯದ ಜೀವನಾಧಾರ ಕೂಡ ಆಗಿದೆ. ಆದರೆ, ಗೋವಿಗಿಂತ ಕತ್ತೆ ಬಹುಪಯೋಗಿ. ಇದನ್ನೇಕೆ ಜನ ಪೂಜಿಸುವುದಿಲ್ಲ, ಗೌರವಿಸುವುದಿಲ್ಲ? ಇದರ ರಕ್ಷಣೆಗಾಗಿ ಬಡಿದಾಡುವುದಿಲ್ಲ. ಸಂರಕ್ಷಣೆಗಾಗಿ ಸಮಿತಿಯನ್ನು ಮಾಡಿಲ್ಲ. ಸರ್ಕಾರ ಕೂಡ ಒಂದು ಬಿಡಿಗಾಸನ್ನೂ ಕತ್ತೆ ಸಂರಕ್ಷಣೆಗೆ ನೀಡಿಲ್ಲ ಎಂದು ಒಂದೇ ಸಮನೆ ಉಸುರಿದೆ. ಎದುರು ಕುಳಿತಿದ್ದ ವಕೀಲ ರಾಘವೇಂದ್ರ ಹೌದಲ್ವ! ಗೋವಿಗೆ ನೀಡಿದಷ್ಟು ಮಹತ್ವ ಕತ್ತೆಗೇಕೆ ನೀಡಿಲ್ಲ? ನಾವೇಕೆ ಕತ್ತೆ ಸಂರಕ್ಷಣೆಗಾಗಿ ಹೋರಾಟ ಮಾಡಬಾರದೆಂದು ಪ್ರಶ್ನಿಸಿದರು.
ಇದೇ ಹೊತ್ತಿನಲ್ಲಿ ನಾಲ್ಕು ಘಟನೆಗಳು ನನ್ನನ್ನು ಬಹುವಾಗಿ ಕಾಡಿದವು. ಒಂದು ಉತ್ತರಖಂಡ್ ವಿಧಾನಸಭೆಯಲ್ಲಿ ಅಲ್ಲಿನ ಪಶುಸಂಗೋಪನಾ ಇಲಾಖೆ ಸಚಿವೆ ರೇಖಾ ಆರ್ಯ ಗೋವಿಗೆ’ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕೆಂಬ ನಿರ್ಣಯ ಮಂಡಿಸಿದ್ದರು. ಎರಡು, ದೂರದ ಕೊಲಂಬಿಯಾದಲ್ಲಿ ಕತ್ತೆಗಳಿಗೆ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕಳೆದ ೧೪ ವರ್ಷಗಳಿಂದ ಮೋನಿಕ್ಯುಯಿರಾ ಪಟ್ಟಣದಲ್ಲಿ ಕತ್ತೆ ಉತ್ಸವ ಆಯೋಜಿಸಲಾಗುತ್ತಿದೆ. ಮೂರು, ಈಜಿಪ್ಟ್‌ನ ಮೃಗಾಲಯದಲ್ಲಿ ಕತ್ತೆಗೆ ಕಪ್ಪು-ಬಿಳಿ ಬಣ್ಣ ಬಳಿದು ’ಜೀಬ್ರಾ’ ಎಂದು ಜನರನ್ನು ನಂಬಿಸುತ್ತಿದ್ದರಂತೆ. ಇದನ್ಹೇಗೋ ಅರಿತವನೊಬ್ಬ ನಕಲಿ ಜೀಬ್ರಾದ ಫೋಟೋ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ನಾಲ್ಕು, ಗಾಜಾದಲ್ಲಿರುವ ಎರಡು ಕತ್ತೆಗಳಿಗೆ ಬಣ್ಣ ಬಳಿದು ಜೀಬ್ರಾ ಎಂದು ನಂಬಿಸಲಾಗಿದೆ. ಇದೇ ರೀತಿ ಚೀನಾ ಮೃಗಾಲಯವೊಂದರಲ್ಲಿ ಟಿಬೇಟಿಯನ್‌ನ ಮುಸ್ಟೀಫ್ಜಾತಿಯ ನಾಯಿಯೊಂದನ್ನು ಸಿಂಹ ಎಂದು ನಂಬಿಸಲಾಗಿತ್ತು. ಜನ ಬೋನಿನ ಬಳಿ ಹೋದಾಗ ಸಿಂಹ ಸ್ವರೂಪದ ನಾಯಿ ಬೊಗಳಿ ತನ್ನ ನಿಜ ಬಣ್ಣ ತಿಳಿಸಿದೆ!
ಇದನ್ನೆಲ್ಲಾ ಕೇಳಿದಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದನ್ನು ಕಾಣಬಹುದು. ಅತ್ಯಂತ ಸಾಧು ಪ್ರಾಣಿ ಎಂದೇ ಕರೆಸಿಕೊಂಡಿರುವ ಹಸು ಕೂಡ ಕೋಪ ಬಂದಾಗ ಒದೆಯುವುದು, ಹಾಯುವುದು ಮಾಡುತ್ತದೆ. ಸ್ವಾಮಿನಿಷ್ಟೆಗೆ ಹೆಸರಾದ ನಾಯಿ ಕೂಡ ತನ್ನ ಯಜಮಾನನನ್ನು ಕಚ್ಚಿರುವ ಉದಾಹರಣೆಗಳಿವೆ. ಆದರೆ, ಕತ್ತೆಯ ಮೇಲೆ ಎಷ್ಟೇ ಮಣಭಾರಹಾಕಿ, ಮೇವು, ನೀರು ನೀಡದಿದ್ದರೂ ಅದು ವ್ಯಗ್ರಗೊಳ್ಳುವುದಿಲ್ಲ. ಹೊಟ್ಟೆ ತುಂಬಾ ಹಾಕಿದರೂ ಅದು ಸಂತಸಗೊಳ್ಳುವುದಿಲ್ಲ. ಸದಾ ಸಮಚಿತ್ತದಿಂದ ಕೂಡಿರುತ್ತದೆ. ಸುಖ-ದುಃಖ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ತಾನು ಜನ್ಮತಳೆದಿರುವುದೇ ಸೇವೆಗಾಗಿ, ಇನ್ನೊಬ್ಬರ ಹಿತಕ್ಕಾಗಿ ಎಂದು ಕಿವುಡನಂತೆ, ಮೂಕನಂತೆ ಬದುಕು ಸವೆಸುತ್ತದೆ.
ಗಡಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂತಹುದ್ದೇ ಕುರುಕಲು ಸ್ಥಳ ಇದ್ದರೂ, ಸೈನಿಕರಿಗೆ ಊಟ – ನೀರು, ಮದ್ದು-ಗುಂಡು ಸಾಗಿಸುವ ಏಕೈಕ ಜೀವಿ ಕತ್ತೆ. ಮನುಷ್ಯನಿಂದ ತಲುಪಲು, ಹೊರಲು ಆಗದ ಭಾರವನ್ನು ಹೊತ್ತು ನಿಸ್ವಾರ್ಥಸೇವೆ ನೀಡುವ ಜೀವಿ ಕತ್ತೆ. ತನ್ನ ಹೆಗಲ ಮೇಲೆ ಮೈಲಿಗೆ ಬಟ್ಟೆ, ಮಡಿಬಟ್ಟೆ; ಸ್ಪೃಷ್ಯರ ಬಟ್ಟೆ, ಅಸ್ಪೃಶ್ಯರ ಬಟ್ಟೆ; ಬಡವನ ಬಟ್ಟೆ – ಶ್ರೀಮಂತನ ಬಟ್ಟೆ ಎಂದೆಲ್ಲಾ ಎಣಿಸದೇ ಹೊತ್ತು ಸಾಗುವ ಕತ್ತೆ ನಿಜಾರ್ಥದಲ್ಲಿ ’ಜಾತ್ಯಾತೀತ’ವಾದಿ. ಗೋವಿನ ಹಾಲನ್ನುಜೀವನಪೂರ್ತಿ ಸೇವಿಸಬೇಕು. ಕತ್ತೆ ಹಾಲನ್ನು ಜೀವನದಲ್ಲೊಮ್ಮೆ ಸೇವಿಸಿದರೆ ಸಾಕು ಅದು One time booster.. ಐದು ಹನಿಕತ್ತೆ ಹಾಲು ೧೦೦ ವರ್ಷ ರೋಗ ನಿರೋಧಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತೆ. ನನಗೆ ಈಗಲೂ ನೆನಪಿದೆ. ಸಣ್ಣವನಿದ್ದಾಗ ನನಗೂ ಕತ್ತೆ ಹಾಲು ಕುಡಿಸಲಾಗಿತ್ತು. ಮಾತ್ರವಲ್ಲ, ನಾನು ನನ್ನ ಮೂರು ಮಕ್ಕಳಿಗೂ ಕತ್ತೆ ಹಾಲಿನ booster ಹಾಕಿಸಿರುವೆ.
ಕತ್ತೆಗಳನ್ನಿಂದು ಅಭಿವೃದ್ಧಿ ಕಾಣದ ರಾಷ್ಟ್ರಗಳಲ್ಲಿಯೇ ಹೆಚ್ಚಾಗಿ ಬಳಸಲಾಗುತ್ತಿದೆ. ಇವನ್ನು ಸರಕು ಸಾಗಾಣಿಕೆಗೆಮಾತ್ರವಲ್ಲದೇ, ಕೃಷಿ ಬಳಕೆಗೆ, ಬರಪರಿಹಾರದ ಕಾರ್ಯಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಕೃಷಿಯಲ್ಲಿ ಅತ್ಯಂತ ಅಗ್ಗದ ಬೆಲೆಗೆ ಬಳಕೆಯಾಗುವ ಶ್ರಮಜೀವಿಗಳಲ್ಲಿ ಮನುಷ್ಯ ಮೊದಲಿಗನಾದರೆ, ಕತ್ತೆ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಕತ್ತೆಯನ್ನು ಕುರಿ ಕಾಯಲೂ ಬಳಸಲಾಗುತ್ತದೆ. ಕತ್ತೆ ಸವಾರಿ ಮಕ್ಕಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಅಚ್ಚುಮೆಚ್ಚು.
ಕತ್ತೆ ಹಾಲು ಮತ್ತು ಮಾಂಸಕ್ಕೆ ಇಟಲಿಯಲ್ಲಿ ಹೆಚ್ಚು ಬೇಡಿಕೆ ಇದೆ. ಯೂರೋಪ್‌ನ ಹಲವು ಕಡೆ ಮಾಂಸದ ಖಾದ್ಯಗಳು ಹೆಚ್ಚು ಜನಪ್ರಿಯಗೊಂಡಿವೆ. ಇದರ ಹಾಲಿನಿಂದ ಸೋಪು, ಕ್ರೀಂಗಳನ್ನು ಉತ್ಪಾದಿಸಲಾಗುತ್ತದೆ. ಕತ್ತೆಯ ಹಾಲು, ಕ್ರೀಂನಿಂದ ಚರ್ಮವ್ಯಾದಿಗಳು ಗುಣವಾಗುತ್ತವೆ. ಅಲ್ಲದೇ ಕತ್ತೆಯ ಚರ್ಮವನ್ನು ಕಾಗದ ತಯಾರಿಸಲು ಬಳಸಲಾಗುತ್ತದೆ. ಕತ್ತೆಯ ಮಾಂಸದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗಿರುವುದರಿಂದ ಚೀನಿಯರಂತು ಮುಗಿಬಿದ್ದು ತಿನ್ನುತ್ತಾರೆ.
ಇವನ್ನೆಲ್ಲಾ ಕಂಡಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಕತ್ತೆಯನ್ನು ಬಲಿಪಶು ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ವಾಸ್ತವದಲ್ಲಿ ಬಲಿಪಶು ಕತ್ತೆಯಲ್ಲ, ಬದಲಾಗಿ ಮನುಷ್ಯನೇ ಆಗಿದ್ದಾನೆ.
ಕತ್ತೆಯನ್ನು ಜೀಬ್ರಾ ಎಂದು ಬಣ್ಣಿಸಲು, ತೋರಿಸಲು, ವೈಭವೀಕರಿಸಬೇಕಾಗುತ್ತದೆ. ಚತುರತೆ ಮತ್ತು ಬುದ್ಧಿವಂತಿಕೆ ಎರಡನ್ನೂ ಬೆರಸಿ ಜನರನ್ನು ನಂಬಿಸಬೇಕಾಗುತ್ತದೆ. ಪಾಪದ ಕತ್ತೆ ಹೊಸವೇಷ ಹೊತ್ತು, ತಾನು ಜೀಬ್ರಾ ಎಂದು ತೋರಿಸಿಕೊಳ್ಳುವ ದುಸ್ಥಿತಿಯಲ್ಲಿದೆ. ’ಒಂದು ಭ್ರಷ್ಟ ಕತ್ತೆ ಹೆಚ್ಚಿನಮಟ್ಟದ ಪುರಸ್ಕಾರಕ್ಕೆ ಪಾತ್ರವಾಗುತ್ತದೆ’. ’ಹಗರಣದ ಕತ್ತೆ ಕಾನೂನಿನ ಅಡಿಯಲ್ಲಿ ಆಶ್ರಯ ಪಡೆಯುತ್ತದೆ’. ’ಎದುರಾಡದ ಕತ್ತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’. ’ವಂಚಕ ಕತ್ತೆ ಹುಲುಸಾಗಿ ಬೆಳೆಯುತ್ತದೆ’. ಕತ್ತೆಯ ಈ ಎಲ್ಲಾ ರೂಪಕಗಳು ಜೀವಂತವಾಗಿ ಮನುಜರಲ್ಲಿಯೂ ಇವೆ. ಕೆಲವು ಕಡೆ ಕತ್ತೆಗಳನ್ನು ಮಳೆ ಬಾರದಿದ್ದಾಗ ಪೂಜೆ ಮಾಡಲು, ಮದುವೆಮಾಡಿಸಲು ಬಳಸಲಾಗುತ್ತದೆ. ವಿಚಿತ್ರವೆಂದರೆ, ಹೊಲಸು ತಿನ್ನುವ ಹಂದಿಗಳನ್ನು ಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ! ’ದಿನ ಬೆಳಗೆದ್ದು ನನ್ನನ್ನು ನೋಡಿ, ನಿಮಗೆ ಶುಭವಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರಾಟವಾಗುವ ಕತ್ತೆ, ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ನಿರ್ಲಕ್ಷಕ್ಕೆಈಡಾಗುವ ಕತ್ತೆ ಎರಡನೇ ದರ್ಜೆಯ ಪ್ರಾಣಿ. ಶೋಷಿತ ಪ್ರಾಣಿ ಆಗಿದೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಕತ್ತೆಯನ್ನು ಜೀಬ್ರಾವನ್ನಾಗಿ, ಸಿಂಹವನ್ನಾಗಿ ಹೇಗೆ ಬೇಕಾದರೂ ಬದಲಾಯಿಸಿ ಬಿಡುತ್ತಾನೆ. ಹೀಗೆ ಬಣ್ಣ ಬಳಿಸಿಕೊಂಡ ಕತ್ತೆಗಳು ಹಾಗೆಯೇ ಇರುವುದಿಲ್ಲ. ಮಳೆ ಬಿದ್ದರೆ ಅವು ಕತ್ತೆಯಾಗುತ್ತವೆ. ಅದು ಪ್ರಧಾನಿ ಬಟ್ಟೆ ಹೊತ್ತು ನಡೆದರೂ ಸರಿ, ಪರಿಚಾರಕನ ಬಟ್ಟೆ ಹೊತ್ತು ನಡೆದರೂ ಸರಿ, ಅದರ ಬೆನ್ನು ತೂಕಹೊರಲೇಬೇಕು. ನನಗನಿಸಿದಂತೆ ಇವು ಟನ್‌ಗಟ್ಟಲೆ ತೂಕಮಾತ್ರ ಹೊರುವುದಿಲ್ಲ, ಅವಮಾನವನ್ನು ಹೊರುತ್ತವೆ. ಯಾವುದೇ ಬಣ್ಣ ಬಳಿದುಕೊಂಡರೂ ಕತ್ತೆಯಾಗಿಯೇ ಉಳಿಯುತ್ತವೆ.
ಯಾರನ್ನಾದರೂ ಕೂಗಿದಾಗ ಸ್ಪಂದಿಸದಿದ್ದರೆ, ಏಯ್ ಕತ್ತೆ ಎಂದು ಕೂಗಿ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಎಲ್ಲರೂ ಕತ್ತೆಯನ್ನು ಕಿವುಡ, ಮೂಕ ಪ್ರಾಣಿ ಎಂದು ಕೊಂಡುಬಿಟ್ಟಿದ್ದಾರೆ. ಇದು ಮೂಕವೂ ಅಲ್ಲ, ಬದಲಿಗೆ ಅತೀವ ತಾಳ್ಮೆಯನ್ನು ಹೊಂದಿದೆ. ಹೀಗಾಗಿಯೆ ಕತ್ತೆಗೆ ಇಂತಹದ್ದೊಂದು ವಿಶೇಷಣ ಬಂದಿರಬಹುದು.
ಕತ್ತೆಯ ಮುಂದೆ ನೀರು ಮತ್ತು ಆಹಾರ ಎರಡನ್ನೂ ಇಟ್ಟರೆ, ಯಾವುದನ್ನೂ ಸೇವಿಸದೆ ಪ್ರಾಣ ಬಿಡುತ್ತದೆ. ಕಾರಣ ಕತ್ತೆಗೆ ಹಸಿವು ಮತ್ತು ದಾಹ ಎರಡರಲ್ಲಿ ಯಾವುದನ್ನು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕೆಂಬ ಜ್ಞಾನ ಹೊಂದಿರುವುದಿಲ್ಲ. ಕತ್ತೆಯ ಮೇಲೆ ಹಣ ಹೂಡಿರಿ. ಅದು ನಿಮಗೆ ಸದಾವಿಧೇಯತೆಯಿಂದ ನಡೆದುಕೊಳ್ಳುತ್ತದೆ. ನಿಮ್ಮನ್ನು ಸ್ವಾಮಿ ಎಂಬಂತೆ ಭಾವಿಸುತ್ತದೆ. ಅದರಲ್ಲೂ ಕತ್ತೆಗಳು ಹೆಂಗಸರಂತೆಆಡು-ಕುರಿಗಳಂತೆ ತಲೆ ತಗ್ಗಿಸಿಕೊಂಡು ಹೇಳಿದ್ದನ್ನುಪಾಲಿಸುತ್ತದೆ. ಕೆಲೆವೆಡೆ ಕುದುರೆಗಿಂತ ಕತ್ತೆ ವಾಸಿ ಎಂಬ ಮಾತಿದೆ. ಕತ್ತೆಯ ಮೇಲೆ ಕೂತರೆ ಹೊರುತ್ತದೆ. ಹೊರಿಸಿದರೆ ಸಾಗುತ್ತದೆ. ಆದರೆ ಕುದುರೆ ಮೇಲೆ ಕೂತರೆ, ಹೊರಿಸಿದರೆ ಎತ್ತಿಬೀಸಾಡುತ್ತದೆ. ಹೀಗಾಗಿ ಕತ್ತೆ ಪವಿತ್ರ ಸ್ಥಳ ಮೆಕ್ಕಾಗಿ ಹೋಗಿಬಂದರೂ, ಅದು ಕತ್ತೆಯಾಗಿಯೇ ಬದುಕು ದೂಡುತ್ತದೆ.
Democratic Party of United States ನ ಚಿಹ್ನೆ ಕೂಡ ಕತ್ತೆಯೇ ಆಗಿದೆ. ಕುದುರೆಗಿಂತ ಕತ್ತೆ ಬಲಶಾಲಿ. ಗಾಬರಿಗೆ ಒಳಗಾಗುವುದಿಲ್ಲ. ನೆನಪಿನ ಶಕ್ತಿಯೂ ಹೆಚ್ಚಾಗಿದೆ. ಒಮ್ಮೆಒಂದು ದಾರಿಯಲ್ಲಿ ಸಾಗಿದರೆ ೨೦ ವರ್ಷವಾದರೂ ಆದಾರಿಯನ್ನು ಗುರುತಿಟ್ಟುಕೊಂಡು ಸಾಗುವ ಪ್ರಾಣಿ. ಜೊತೆಗೆ ಇದು ಒಂಟಿಯಾಗಿ ಇರಲು ಬಯಸುವುದಿಲ್ಲ. ಜೋಡಿ ಇರಲೇಬೇಕು. ಇಲ್ಲ ಆಡು-ಕುರಿಯ ಸಂಗಡವಾದರೂ ಇರಬೇಕು. ಮಾನವನಿಗೆ ಕತ್ತೆಯು ಶತಮಾನಕ್ಕೂ ಹಿಂದಿನಿಂದ ಸಹಕಾರಿಯಾಗಿದೆ.
ಗಂಡುಕತ್ತೆ, ಹೆಣ್ಣು ಕುದುರೆಯೊಂದಿಗೆ ಕೂಡಿದಾಗ ಜನಿಸುವುದೇ ಹೆಸರಗತ್ತೆ. ಗಂಡು ಕುದುರೆ, ಹೆಣ್ಣುಕತ್ತೆಯೊಂದಿಗೆ ಕೂಡಿದಾಗ ಜನಿಸುವುದು ಹಿನ್ನಿ. ಜೀಬ್ರಾ ಮತ್ತುಕತ್ತೆ ಕೂಡಿದಾಗ ಹುಟ್ಟುವುದು ಜೊಂಕಿ, ಜೀಬ್ರಾಯ್ಡ್ಎನ್ನುತ್ತಾರೆ.
ಹೆಸರಗತ್ತೆಯನ್ನು ಸರಕು ಸಾಗಾಣಿಕೆಗೆ ಬಳಸುವುದರಿಂದ, ಅವುಗಳನ್ನು ನಿರ್ವೀರ್ಯರನ್ನಾಗಿಸಲಾಗಿರುತ್ತದೆ. ಅಸಿನೋಡಿಮಾರ್ಟಿನಾ, ಫ್ರಾಂಕಾ, ಮೊಮತ್ತ್ ಜಾಕ್ ತಳಿಯ ಕತ್ತೆಗಳನ್ನು ಗೂಳಿಯಂತೆ ಬಳಸಲಾಗುತ್ತದೆ.
ಇಷ್ಟಕ್ಕೂ ಕತ್ತೆಯ ಮೂಲ ಸೊಮಾಲಿಯಾ. ಆಡು-ಕುರಿ, ಗೋವನ್ನು ಸಾಕುತ್ತಿದ್ದ ಕಾಲದಿಂದಲೂ ಕತ್ತೆ ಇದೆ. ಗಂಡು ದನವನ್ನು ಕೃಷಿ ಮತ್ತು ಸಾಗಾಣಿಕೆಗೆ ಬಳಸುತ್ತಿದ್ದರೂ, ದುರ್ಗಮಹಾದಿ ಕ್ರಮಿಸಲು ಕತ್ತೆಯೇ ಬೇಕಿತ್ತು. ಇದಲ್ಲದೇ, ಕತ್ತೆ ತಿಂದ ಮೇವನ್ನು ಮೆಲುಕು ಹಾಕುತ್ತಾ, ನೀರಿನ ಅವಶ್ಯಕತೆ ಇಲ್ಲದೆಯೂ ಬದುಕುತ್ತದೆ. ಸಾಲದಕ್ಕೆ ಇದರ ಹಾಲನ್ನು ಗೋವಿನ ಹಾಲಿನಂತೆ ಬಳಸಲಾಗಿದೆ. ಮಾಂಸವನ್ನು ಸವಿಯಲಾಗಿದೆ.
ಸಿರಿಯಾದಲ್ಲಿ ಕತ್ತೆಯನ್ನು ಅಲ್ಲಿನ ಡಿಯೋನಿಸಿಸ್ ದೇವತೆಗೆ ಹೋಲಿಸಲಾಗಿದೆ. ಈಜಿಪ್ಟ್‌ನಲ್ಲಿ ಮನುಷ್ಯರನ್ನು ಅಂತ್ಯಸಂಸ್ಕಾರ ಮಾಡಿದಂತೆ ಕತ್ತೆಗೂ ಅಂತಿಮ ಗೌರವಕೊಡಲಾಗಿದೆ. ೧೬೭೯ರಲ್ಲೇ ಆರಿಜೋನ ಎಂಬಲ್ಲಿ ಕತ್ತೆಯ ಬಳಕೆ ಕುರಿತಂತೆ ದಾಖಲೆಗಳಿವೆ. The Domestic Animal Diversity Information System ನ ೨೦೦೬ರ ವರದಿಯಂತೆ ಜಗತ್ತಿನಲ್ಲಿ ೪೧ ಮಿಲಿಯನ್ ಕತ್ತೆಗಳಿವೆ. ಕತ್ತೆಯ ಬಳಕೆಯಲ್ಲಿ ಭಾರತಕ್ಕಿಂತ ಚೀನಾ ಮುಂದಿದೆ.
ಕತ್ತೆ ಸಂಸ್ಕೃತಿಯ ಒಂದು ಭಾಗ. ಈಜಿಪ್ಟಿನ ಸೂರ್ಯದೇವನ ಸಂಕೇತ ಕೂಡ ಕತ್ತೆ ಆಗಿದೆ. ಜೀಸಸ್ ಕೂಡ ಕತ್ತೆಯ ಮೇಲೆ ಸವಾರಿ ಮಾಡುತ್ತಾ ಜೆರುಸಲೇಂ ಪ್ರವೇಶಿಸಿದ್ದಾರೆ. ಬೈಬಲ್‌ನ ಹಲವು ಕಡೆ ಕತ್ತೆ ಕುರಿತಂತೆ ಉಲ್ಲೇಖಗಳಿವೆ. ಕತ್ತೆಯ ಹಿಂಭಾಗ ಮತ್ತು ತೋಳಿನ ಭಾಗದಲ್ಲಿ ಜೀಸಸ್ ಗುರುತು ಹಾಕಿದ್ದಾರೆಂದು ಇಂದಿಗೂ ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಕತ್ತೆ ಲಕ್ಷ್ಮಿಯ ವಾಹನ, ಕರಾಳ ರಾತ್ರಿ ದೇವರ ವಾಹನ ಎಂದೂ ನಂಬಲಾಗಿದೆ. ಪಂಚತಂತ್ರ ಕಥೆಗಳಲ್ಲಿ ಕೂಡ ಕತ್ತೆಯ ಉಲ್ಲೇಖ ಇದೆ.
ಜೋಹರ್ ಧರ್ಮದಲ್ಲಿ ಮಾತ್ರ ಕತ್ತೆ ಅಶುದ್ಧ ಪ್ರಾಣಿ. ಹೋಮರ್‌ನ ಕಾವ್ಯಗಳಲ್ಲಿ, ಷೇಕ್ಸ್‌ಫಿಯರ್ ಸಾನೆಟ್ಟುಗಳಲ್ಲಿ ಕೂಡ ಕತ್ತೆಯ ಪಾತ್ರ ಇದೆ. ವಿಲಿಯಂ ವರ್ಡ್ಸ್‌ವರ್ಥ್ ತನ್ನ’ಬೆಲ್‌ಎಬೆಲ್’ನಲ್ಲಿ ಕತ್ತೆ ಕ್ರೈಸ್ತರ ಸಂಕೇತ. ಇದೊಂದು ವಿಧೇಯ ಮತ್ತು ತಾಳ್ಮೆಯ ಪ್ರಾಣಿ ಎಂದಿರುವನು. ’ಕತ್ತೆಯೊಂದಿಗೆಪಯಣ’ ಕೃತಿಯಲ್ಲಿ ಕತ್ತೆ ಹಠಮಾರಿ ಮತ್ತು ಭಾರ ಹೊರುವಪ್ರಾಣಿ ಎಂದು ರಾಬರ್ಟ್ ಲೂಯಿಸ್ ಸ್ಟೀವನ್‌ಸನ್ ಬಣ್ಣಿಸಿದ್ದಾನೆ. ೧೯೪೦ರಲ್ಲಿ ಬಂದ ಡಿಸ್ನಿ ಫಿಲಂ ಫಂಟಾಸಿಯಾ ಮತ್ತು ೧೯೬೭ರ ಬ್ರೈಟಿ ಆಫ್ ದಿ ಗ್ರ್ಯಾಂಡ್ ಕ್ಯಾಂಗನ್ಚಿತ್ರಗಳಲ್ಲಿಯೂ ಕತ್ತೆಯ ಪಾತ್ರವಿದೆ.
ಇತಿಹಾಸದ ಉದ್ದಕ್ಕೂ ಕತ್ತೆ ಎಂದರೆ ಭಾರ ಹೊರುವ ಪ್ರಾಣಿ. ಇದು ಸಾಮಾನ್ಯವಾಗಿ ೫೦೦ ಕೆ.ಜಿ. ವರೆಗೂ ತೂಗ ಬಲ್ಲವು. ೨೦ರಿಂದ ೩೦ ವರ್ಷಗಳ ಕಾಲ ಜೀವಿಸಬಲ್ಲವು. ಕತ್ತೆ ಮನುಷ್ಯರಂತೆ ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪ. ಮನುಷ್ಯನಿಗಿಂತ ಅತ್ಯಂತ ಜತನವಾಗಿ ತನ್ನ ಮರಿಯನ್ನು ನೋಡಿಕೊಳ್ಳುತ್ತದೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ರಾಜಕಾರಣಿ ಎಂಬ ಶಬ್ಧಕೂಡ ’ಗದಾ’ ಎಂಬ ಅರ್ಥವನ್ನು ನೀಡುತ್ತದೆ ಎಂಬುದನ್ನುಕೇಳಿ ಅಚ್ಚರಿಗೊಂಡೆ. ಗದಾ ಎಂಬ ಪದ ಸಂಸ್ಕೃತ ಮೂಲದ್ದಾಗಿದೆ. ಆಗಲೇ ನನಗೆ ಗಾರ್ದಭ ಗಾನ ಗುನುಗಿತು.
ಮುತ್ತುಗದ ಹೂವಿಗಿಂತ ಕತ್ತೆಯ ಮರಿ ಚಂದ ಹೌದು ಕತ್ತೆಯಮರಿ ನೋಡಲು ಬಲು ಸುಂದರ. ಅದರ ದಪ್ಪಾದಾದ ಬಲ್ಬಿ ನಂತಹ ಕಣ್ಣುಗಳು, ಅಗಲವಾದ ಕಿವಿಗಳನ್ನುಹೊಂದಿರುವ ಪಾಪದ ಪ್ರಾಣಿಯನ್ನು ನೋಡಿದಾಗ ಕತ್ತೆ ಎನ್ನಲು ಮನಸ್ಸು ಬಾರದು. ಅರ್ಥಶಾಸ್ತ್ರದ ಚಾಣಕ್ಯ ಕೂಡ ಕತ್ತೆಯ ಗುಣಗಾನ ಮಾಡಿ ಅದರ ವಿಶೇಷತೆಯನ್ನುಉಲ್ಲೇಖಿಸಿದ್ದಾನೆ. ಕತ್ತೆ ಮಳೆ, ಗಾಳಿ, ಚಳಿ ಯಾವುದನ್ನೂ ಲೆಕ್ಕಿಸದೇ ದುಡಿಯುವ ಪ್ರಾಣಿ. ಇದು ನಾಯಿ, ಬೆಕ್ಕುಗಳಂತೆಸುಲಭವಾಗಿ ಪಳಗುವುದಿಲ್ಲ. ಪಳಗಿಸುವುದು ಕಷ್ಟಕರ. ಪಳಗಿದರೆ, ನಾಯಿಗಿಂತ ನಿಷ್ಠೆಯಿಂದ, ಓರ್ವ ಸ್ನೇಹಿತನಂತೆ ಜೊತೆಗಿರುತ್ತವೆ.










