ಚಿಕ್ಕಮಗಳೂರು: ರೈತರ ಸಾಲ ಮನ್ನಾದಂತೆ ರಾಜ್ಯ ಸರ್ಕಾರ ಮೀನುಗಾರರ ಸಾಲವನ್ನೂ ಮನ್ನಾ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್ ಒತ್ತಾಯಿಸಿದರು.ನಗರದ ಲಕ್ಷ್ಮೀಶ ಸಮುದಾಯ ಭವನದಲ್ಲಿ ಗುರುವಾರ ನಡೆದ ತಾಲ್ಲೂಕು ಶ್ರೀ ಗಂಗಾ ಪ.ಜಾತಿ ಹಾಗೂ ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಕೊರತೆಯಿಂದಾಗಿ ರೈತರು ಮತ್ತು ಬೆಳೆಗಾರರು ಬೆಳೆ ನಷ್ಟದಿಂದ ತತ್ತರಿಸಿದ್ದಾರೆ, ಅದೇ ರೀತಿ ಕೆರೆ ಕಟ್ಟೆಗಳು ತುಂಬದ ಹಿನ್ನೆಲೆಯಲ್ಲಿ ಅವುಗಳಲ್ಲಿ ಸಾಕಲಾಗಿದ್ದ ಮೀನುಗಳು ಸತ್ತು ಮೀನುಗಾರರೂ ಸಹ ನಷ್ಟ ಅನುಭವಿಸಿದ್ದಾರೆ ಎಂದರು.ಇದರಿಂದಾಗಿ ಮೀನುಗಾರರು ಪಡೆದ ಸಾಲವನ್ನು ಮರುಪಾವತಿಸಲಾಗದೇ ಕುಟುಂಬದ ನಿರ್ವಹಣೆ ಮಾಡಲಾಗದೇ ಪರದಾಡುತ್ತಿದ್ದಾರೆ ಎಂದ ಅವರು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ಸಾಲದಂತೆ ಮೀನುಗಾರರ ಸಾಲವನ್ನೂ ಮನ್ನಾ ಮಾಡಬೇಕು, ಬೇರೆ ಸಮುದಾಯಗಳಿಗೆ ನೀಡುವಂತೆ ಮೀನುಗಾರರಿಗೂ ನಿವೇಶನ ಮತ್ತು ಮನೆಯನ್ನು ವಿತರಿಸಬೇಕು ಎಂದು ಆಗ್ರಹಿಸಿದರು.ಪ.ಜಾತಿ/ಪ.ವರ್ಗ ದವರ ಹೆಸರಿನಲ್ಲಿ ಬೇರೆ ಸಮುದಾಯದವರು ಸಹಕಾರ ಸಂಘಗಳನ್ನು ಮಾಡಿಕೊಂಡು ಸರ್ಕಾರದ ಎಲ್ಲಾ ಸವಲತ್ತು ಮತ್ತು ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ, ಪ.ಜಾತಿ ಮತ್ತು ಪ.ವರ್ಗದವರಿಗೆ ಮೀನುಗಾರಿಕೆ ಮತ್ತು ಮೀನಿನ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ಅರೋಪಿಸಿದ ಅವರು ರಾಜ್ಯ ಸರ್ಕಾರ ತಕ್ಷಣ ಇದನ್ನು ತಡೆಗಟ್ಟಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಧರ್ಮೇಶ್ ಮಳೆ ಕೊರತೆಯಿಂದಾಗಿ ಕೆರೆ ಕಟ್ಟೆಗಳು ತುಂಬದೇ ಮೀನುಗಾರರು ಒಂದೆಡೆ ನಷ್ಟ ಅನುಭವಿಸಿದ್ದರೆ ಇನ್ನೊಂದೆಡೆ ಮೀನುಗಾರಿಕೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಅವರಿಗೆ ಎಲ್ಲಾ ಹಂತದಲ್ಲೂ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಹಕಾರ ಸಂಘಗಳ ಮುಖಾಂತರ ಮೀನುಗಾರರನ್ನು ಗುರುತಿಸದೇ ಅವರಿಗೆ ಬೇಕಾದವರಿಗೆ ಮೀನುಗಾರಿಕೆ, ಕೆರೆಯ ಹರಾಜು ಹಾಗೂ ಗುತ್ತಿಗೆ ನೀಡುತ್ತಿದ್ದಾರೆ, ಕೆರೆಗಳಲ್ಲಿ ಊರು ಮತ್ತು ಗ್ರಾಮಗಳ ತ್ಯಾಜ್ಯ ತುಂಬಿ ಮೀನುಗಳು ಸತ್ತು ಹೋಗುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.ಈ ವರ್ಷದ ಮಳೆಯಿಂದಾಗಿ ಕೆಲವು ಕೆರೆಗಳು ತುಂಬಿದ್ದರೂ ಇಲಾಖೆ ಮೀನು ಮರಿಗಳನ್ನು ಮೀನುಗಾರರಿಗೆ ವಿತರಿಸಿಲ್ಲ, ಯಾವುದೇ ಅನುದಾನ ನೀಡಿಲ್ಲ, ಎಂದು ದೂರಿದ ಅವರು ಇದರ ವಿರುದ್ದ ಸದ್ಯದಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದರು.ಗುರುವಾರ ನಿಧನರಾದ ಮೀನುಗಾರ ಹರೀಶ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು, ಸಂಘದ ನಿರ್ದೇಶಕರಾದ ಮಂಜು, ಸಿ.ಬಿ.ಮಂಜುನಾಥ್, ರಾಧಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.










