ಚಿಕ್ಕಮಗಳೂರು : ಸರಿಸುಮಾರು ಒಂದು ತಿಂಗಳು. ಅದ್ರಲ್ಲೂ ಕಳೆದ 9 ದಿನಗಳಿಂದತೂ ಮಲೆನಾಡಲ್ಲಿ ಸೂರ್ಯನ ಕಿರಣಗಳು ನೆಲ್ಲಕ್ಕೆ ಬೀಳದಂತೆ ಮೋಡಗಟ್ಟಿ ಸುರಿಯುತ್ತಿರೋ ವರುಣನ ಅಬ್ಬರಕ್ಕೆ ಅಕ್ಷರಶಃ ಮಲೆನಾಡು ತತ್ತರಿಸಿ ಹೋಗಿದೆ. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮಕ್ಕಳ ಆಟದ ಮೈದಾನವಾಗಿದ್ದು ಕೆರೆ, ಹಳ್ಳ-ಕೊಳ್ಳ, ನದಿಗಳೆಲ್ಲಾ ಮೈದುಂಬಿ ಅಪಾಯವನ್ನ ಬಾಯ್ತೆರೆದಿರುವಂತೆ ಹರಿಯುತ್ತಿವೆ. ಮಲೆನಾಡಲ್ಲೀಗ ಎಲ್ಲೆಂದರಲ್ಲಿ ನೀರು… ನೀರು… ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿಯಲ್ಲಿ ಸುರಿಯುತ್ತಿರೋ ಮಹಾಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ರೆ, ಮಲೆನಾಡಿನಾದ್ಯಂತ ಅಸಂಖ್ಯಾತ ಕೃತಕ ಫಾಲ್ಸ್ಗಳು ಜನ್ಮತಾಳಿವೆ. ಗುಡ್ಡದಿಂದ ಹರಿಯೋ ನೀರು ಒಂದೆಡೆ ಸೇರಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಜಿಲ್ಲೆಯ ಪ್ರಮುಖ ಜಲಪಾತಗಳಾದ ಹೊನ್ನಮ್ಮನ ಹಳ್ಳ, ಸಗೀರ್ ಫಾಲ್ಸ್, ಸಿರಿಮನೆ ಫಾಲ್ಸ್, ಶಂಕರ್ ಫಾಲ್ಸ್, ಮಾಣಿಕ್ಯಧಾರಾ, ಶಬರಿ, ಹೆಬ್ಬೆ ಫಾಲ್ಸ್ಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನ ಆಕರ್ಷಿಸ್ತಿವೆ. ಆದ್ರೆ, ಕಣ್ಣು ಹಾಯಿಸಿದ್ದಲ್ಲೆಲ್ಲಾ ನೀರು ನಿಂತಿದ್ದು, ತೋಟ, ಹೊಲ-ಗದ್ದೆಗಳೆಲ್ಲಾ ಜಲಾವೃತಗೊಂಡಿರೋದ್ರಿಂದ ಮಲೆನಾಡಿಗರು ಮುಂದಿನ ಕಥೆ ಏನಾಪ್ಪ ಅಂತ ಚಿಂತಾಕ್ರಾಂತರಾಗಿದ್ದಾರೆ.