ಮರಳಿ ಬಾರದ ನೆರಿಗೆ ಲಂಗದ ದೀಪಾವಳಿ…

1230

   ಬೆಳಕಿನ ಹಬ್ಬ ದೀಪಾವಳಿ ಆಗಮಿಸಿದೆ. ಆದರೆ ದೀಪಾವಳಿ ಅಂದ ಕೂಡಲೇ ಬಾಲ್ಯದಲ್ಲಿ ಮೂಡುತ್ತಿದ್ದ ನೂರ್ಮಿಂಚುಗಳು, ಪುಳಕ ಎಲ್ಲವೂ ಈಗ ಕೇವಲ ನೆನಪಷ್ಟೆ. ದೀಪಾವಳಿಗೂ ಮೊದಲು ಅಮ್ಮ ಹಬ್ಬಕ್ಕಾಗಿ ಮನೆಯನ್ನು ಶುಚಿಗೊಳಿಸುವಾಗ ಅಪ್ಪ ಮಸುಕಾದ ಗೋಡೆಗಳಿಗೆ ಬಣ್ಣ ಬಳಿಯುವಾಗಲೇ ಹಬ್ಬದ ಸಂಭ್ರಮ ಮಕ್ಕಳಾದ ನಮ್ಮಲ್ಲಿ ಗರಿಗೆದರುತ್ತಿತ್ತು. ಪ್ರತಿ ದೀಪಾವಳಿಗೂ ನನ್ನನ್ನು ಕಾಡುವುದು ಅಮ್ಮ ಹೊಲಿಸಿಕೊಡುತ್ತಿದ್ದ ಜರಿ ನೆರಿಗೆ ಲಂಗ. ನರಕಚತುರ್ದರ್ಶಿಯ ಮುನ್ನಾ ದಿನ ಮನೆಯ ಎಲ್ಲಾ ನೀರಿನ ಕೊಳಗ ಹಾಗೂ ಹಂಡೆಗಳನ್ನೂ ಫಳಗುಟ್ಟುವಂತೆ ಬೆಳಗುತ್ತಿದ್ದಳು. ವಿಶೇಷವಾಗಿ ಸ್ನಾನದ ಮನೆಯ ಹಂಡೆಯಂತೂ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿತ್ತು.ಶುಚಿಯಾದ ನೀರು ತುಂಬಿದ ಹಂಡೆಗೆ ಕವಟೆಕಾಯಿಯ ಹಾರ ಹಾಗೂ ಬಿಳಿ ಮತ್ತು ಕೆಂಪು ಪಟ್ಟಿಗಳು ನಿಜವಾದ ಹಬ್ಬದ ವಾತಾವರಣಕ್ಕೆ ನಾಂದಿಹಾಡುತ್ತಿದ್ದವು.ಹಬ್ಬದ ಗುಂಗಿನಲ್ಲೇ ಮಲಗಿರುತ್ತಿದ್ದ ನಾನೂ ಹಾಗೂ ನನ್ನ ತಮ್ಮ ಏಳಿಸದೆಯೇ ಎಣ್ಣೆ ಸ್ನಾನಕ್ಕೆ ಅಮ್ಮನ ಮುಂದೆ ಹಾಜರ್. ಸ್ನಾನದ ನಂತರ ದೇವರಿಗೆ ಹಾಗೂ  ಹಿರಿಯರ ಕಾಲಿಗೆ ನಮಸ್ಕರಿಸಿ ವಿಶೇಷವಾಗಿ ನರಕ ಚತುರ್ದರ್ಶಿಯಂದು ಮಾಡುತ್ತಿದ್ದ ಹಬೆಯಾಡುವ ಸೌತೆಕಾಯಿ ಅಥವಾ ಸಿಹಿಸೋರೇಕಾಯಿ ಕಡುಬನ್ನು ತುಪ್ಪದೊಂದಿಗೆ ಗಬಗಬನೆ ತಿಂದು ಬಿಲ್ಲಿಗೆ ಹೂಡಿದ ಬಾಣದಂತೆ ನಾನೂ ನನ್ನ ತಮ್ಮ ಪಟಾಕಿ ಡಬ್ಬಿಗಳತ್ತ ಪುಟಿಯುತ್ತಿದ್ದೆವು.ಟ್ರಾನ್ಸ್ ಪೋರ್ಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನಿಗೆ ದೀಪಾವಳಿ ಬೋನಸ್ ದೊರಕುತ್ತಿತ್ತು.ಅದರಿಂದಷ್ಟೆ ನಮ್ಮಿಬ್ಬರ ಪಟಾಕಿ ದಾಹ ತಣಿಯುತ್ತಿದ್ದುದ್ದು ಇಲ್ಲದಿದ್ದರೆ ಅಪ್ಪನಿಗೆ ಬರುತ್ತಿದ್ದ ತಿಂಗಳ ಸಂಬಳದಲ್ಲಿ ಅಮ್ಮ ಮನೆ ಖರ್ಚುಗಳನ್ನೆ ನಿಭಾಯಿಸಲು ಕಷ್ಟಪಡುವಂತಾಗುತ್ತಿತ್ತು. ಆದರೆ ತಂದಿದ್ದ ಪೂರ್ತಿ ಪಟಾಕಿ ನಮ್ಮ ಕೈಗೆ ಸಿಗುತ್ತಿರಲ್ಲಿಲ್ಲ ಬಲಿಪಾಡ್ಯಮಿಯ ದೀಪದಿಂದ ಕಂಗೊಳಿಸುತ್ತಿದ್ದ ರಾತ್ರಿಯಂದು ಅದಕ್ಕೂ ಮೊದಲು ಕೈಗೆ ಸಿಗುತ್ತಿದ್ದ ಒಂದೊ,ಎರಡೊ ರೂಪಾಯಿಗಳನ್ನು ಹಿಡಿದುಕೊಂಡು ಅಂಗಡಿಗೆ ಒಡುತ್ತಿದ್ದೆವು.

firstsuddi

ನಮ್ಮ ಅಂಗೈನಲ್ಲಿರುತ್ತಿದ್ದ ನಾಣ್ಯಗಳಿಗೆ ದೊರಕುತ್ತಿದ್ದ ಕೇಪಿನ ಬಿಲ್ಲೆಗಳು, ಹಾವಿನ ಮಾತ್ರೆ ಮುಂತಾದವುಗಳನ್ನು ತಂದು ಚಟಪಟ ಎಂದು ಹುಡಿಸುವಾಗ ನಮ್ಮ ಕಣ್ಣಲ್ಲಿ ಮೂಡುತ್ತಿದ್ದ ಸಂತೋಷ ತೃಪ್ತಿಗಳಿಗೆ ಇಂದಿನ ದೀಪಾವಳಿಯ ಬೆಲೆಬಾಳುವ ಯಾವ ಉಡುಗೊರೆಯೂ ಸಮವಾಗಲಾರದು.ಪಟಾಕಿ ಡಬ್ಬಿಗಳಲ್ಲಿರುತ್ತಿದ್ದ ಪಟಾಕಿಗಳನ್ನು ಮೊದಲೆ ಇಬ್ಬಾಗವಾಗಿಸಿಕೊಂಡು ಪೈಪೋಟಿಯ ಮೇಲೆ ಹೊಡೆಯುತ್ತಿದ್ದೆವು.ಧರಿಸಿರುತ್ತಿದ್ದ ಜರಿ ನರಿಗೆ ಲಂಗವನ್ನು ಒಂದು ಕೈಲಿ ಹಿಡಿದುಕೊಂಡು ಇನ್ನೊಂದರಿಂದ ಎಲ್ಲಾ ಪಟಾಕಿಗಳನ್ನು ಹೊಡೆದು ಮುಗಿಸಿದ ನಂತರ ಅಯ್ಯೋ ಇಷ್ಟು ಬೇಗ ಮುಗಿದು ಹೋಯ್ತಾ, ಇನ್ನೂ ಸ್ವಲ್ಪ ಇರಬೇಕಿತ್ತು ಕಣೋ ಅನ್ನುತ್ತಾ ದೀಪಾವಳಿಯಂದು ವಿಶೇಷವಾಗಿ ಮಾಡುವ ಘಮ್ಮೆನ್ನುವ ಅತಿರಸ( ಕಜ್ಜಾಯ)ದ ಕರೆಗೆ ಓಡುತ್ತಿದ್ದೇವು. ನಿಯಮಿತ ಆದಾಯದ ದಿನಗಳವು ಪಟಾಕಿ ತರಲು ಅಪ್ಪನೊಂದಿಗೆ ಕಾಲ್ನಡಿಗೆಯಲ್ಲೇ ಕುಪ್ಪಳಿಸುತ್ತಾ ಹೋಗುತ್ತಿದ್ದೆವು.ಮನೆಗೆ ವಾಪಾಸಾಗುವಾಗ ಹೆಚ್ಚು ಕಡಿಮೆ ನಾಲ್ಕು ಕಿ.ಮೀ ನಷ್ಟು ನಡೆದಿರುತ್ತಿದ್ದ ನಮ್ಮ ಪುಟ್ಟ ಪಾದಗಳಿಗೆ ದಣಿವಿನ ಅರಿವೇ ಇರುತ್ತಿರಲಿಲ್ಲ.

   ದಶಕಗಳು ಕಳೆದಂತೆ ಅರ್ಥಪೂರ್ಣವಾಗಿರುತ್ತಿದ್ದ ಹಬ್ಬದ ಆಚರಣೆಗಳು ಡಂಬಾಚಾರವಾಗುತ್ತಿದೆ. ಕೈಯ್ಯಲ್ಲಿ ಸಾಕಷ್ಟು ಹಣವಿದ್ದರೂ ಬಾಲ್ಯದಲ್ಲಿ ದೊರಕುತ್ತಿದ್ದ ಸಂತೋಷ ಮರಿಚೀಕೆಯಾಗಿದೆ. ದೇವರ ಅಲಂಕಾರ, ಸ್ವಯಂ ಅಲಂಕಾರದಲ್ಲಿ ನಾವು ಗೃಹಿಣಿಯರು ತೋರ್ಗಾಣಿಕೆಯ ಆಚರಣೆಗಳನ್ನು ಮಾಡುತ್ತಿದ್ದೇವೆ. ಇಂದು ಎಷ್ಟೋ ಮನೆಗಳಲ್ಲಿ ಹಬ್ಬದಂದು ಮನೆಯ ಹಿರಿಯರಿಗೆ ಕಿರಿಯರು ಹೊಸ ಬಟ್ಟೆ ಧರಿಸಿ ಕಾಲಿಗೆ ನಮಸ್ಕರಿಸುವ ಪದ್ಧತಿ ಆಚರಣೆಯಲ್ಲಿಲ್ಲ. ಈ ಒಂದು ಪುಟ್ಟ ಆಚರಣೆ ಆಗ ನಮ್ಮ ಮನಸ್ಸಿನ್ನಲ್ಲಿ ಹಿರಿಯರ ಬಗೆಗೆ ಭಯ ಗೌರವಗಳನ್ನು ಹೆಚ್ಚಿಸುತ್ತಿದ್ದವು.ಆದರೆ ಇಂದಿನ ಪೀಳಿಗೆ ಗುರು ಹಿರಿಯರಿಗೆ ಗೌರವ ನೀಡದಿರಲು ಕಾರಣ ತಪ್ಪಿ ಹೋದ ಈ ನಮ್ಮ ಆಚರಣೆಗಳು ಅಂದು ವಿಶೇಷವಾಗಿ ಮನೆಯಲ್ಲಿಯೇ ದೀಪಾವಳಿಗೆ ಕಜ್ಜಾಯ ತಯಾರಾಗುತ್ತಿತ್ತು.ಕಜ್ಜಾಯದ ತಯಾರಿ ಒಂದು ತಪಸ್ಸಿದ್ದಂತೆ ಏಕೆಂದರೆ ನೆನೆಸಿದ ಅಕ್ಕಿಯನ್ನು ಹದವಾಗಿ ಒರಳಿನಲ್ಲಿ ಕುಟ್ಟಿ ಎಳೆ ಎಳೆಯಾದ ಬೆಲ್ಲದ ಪಾಕದೊಂದಿಗೆ ಬೆರೆಸಿ ಹದ ತಪ್ಪದಂತೆ ಒಲೆ ಮೇಲೆ ಆಡಿಸಿ ಇಳಿಸಿ ತಯಾರಾದ ಹಿಟ್ಟನ್ನು ತಟ್ಟಿ ಎಣ್ಣೆಗೆ ಬಿಟ್ಟರಷ್ಟೇ ಮೃದುವಾದ ರುಚಿರುಚಿಯಾದ ಕಜ್ಜಾಯ ತಯಾರಾಗುತ್ತಿದ್ದುದು, ಪಾಕದ ಹದ ತಪ್ಪಿತೆಂದರೆ ಕಜ್ಜಾಯ ಒಂದೋ ಎಣ್ಣೆಯಲ್ಲಿ ಚದುರುತ್ತಿತ್ತು ಇಲ್ಲವೋ ಕಲ್ಲಿನಂತೆ ಗಟ್ಟಿಯಾಗುತ್ತಿತ್ತು. ನಿಜ, ಬದುಕಿನ ಕಷ್ಟ ಸುಖಗಳಿಗೆ ಹೊಂದಿಕೊಂಡು ತಾಳ್ಮೆಯಿಂದ ಜೀವನ ನಡೆಸಲು ಪ್ರತಿನಿತ್ಯದ ಈ ಎಲ್ಲಾ ಕೆಲಸಗಳೂ ನಮ್ಮನ್ನು ಸದೃಢಗೊಳಿಸುತ್ತಿದ್ದವು. ಆದರೆ ಇಂದು ಮನೆಗೆ ಬರುವ ಅತಿಥಿಗಳಿಗೆ ನಾವು ಬೇಕರಿಗಳಲ್ಲಿ ತಯಾರಾಗುವ ಪ್ಯಾಕ್ಡ್ ಸ್ವೀಟ್ ಗಳನ್ನು ನೀಡಿ ಸತ್ಕರಿಸುತ್ತೇವೆ ಅಂತೆಯೇ ನಮ್ಮ ಬದಲಾದ ಜೀವನ ಶೈಲಿ, ಟೊಳ್ಳು ಆಚರಣೆಗಳು, ಢಂಭಾಚಾರದ ಉಡುಗೊರೆಗಳು ಖಂಡಿತಾ ಬಾಲ್ಯದ ನನ್ನ ದೀಪಾವಳಿಯನ್ನೂ, ನರಿಗೆ ಲಂಗದ ನಡಿಗೆಯನ್ನೂ ತಂದುಕೊಡಲು ಸಾಧ್ಯವಿಲ್ಲ.ಇನ್ನಷ್ಟೂ ಮತ್ತಷ್ಟೂ ಈ ತೋರ್ಗಾಣಿಕೆಯ ಆಚರಣೆಯಲ್ಲಿ ಮುಳುಗಿ ಹೋಗುವ ಬದಲು ಮನದಲ್ಲಿ ಭಕ್ತಿ ತುಂಬಿಕೊಂಡು ನಮ್ಮ ಮಕ್ಕಳಿಗೆ ಹಬ್ಬಗಳ ಸರಳ ಹಾಗೂ ಅರ್ಥಪೂರ್ಣ ಆಚರಣೆಯ ಬಗ್ಗೆ ತಿಳಿಸಿಕೊಡುವುದೊಂದೇ ಮುಂದಿರುವ ಮಾರ್ಗ.