ಚಿಕ್ಕಮಗಳೂರು: ಅಧಿಕಾರಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಈ ಹಿಂದೆ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದು, ಪಟ್ಟಕ್ಕಾಗಿ ದೇವೇಗೌಡ ಅವರ ಕುಟುಂಬ ಅತಿರುದ್ರ ಮಹಾಯಾಗ ನಡೆಸಿದ್ದರು. ಕುಮಾರಸ್ವಾಮಿ ಅವರು ಸಿಎಂ ಆದ ಬಳಿಕ ಶೃಂಗೇರಿಗೆ ಐದು ಬಾರಿ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗವನ್ನು ಅವರು ಮಾಡಿಸಿದ್ದರು. ಈ ಹಿಂದೆಯೂ ಸರ್ಕಾರ ಅಸ್ಥಿರತೆ ಉಂಟಾದಾಗ ಸಿಎಂ ಕುಮಾರಸ್ವಾಮಿ ಅವರು ಶೃಂಗೇರಿ ಭೇಟಿ ನೀಡಿದ್ದು, ಸಿಎಂ ಮತ್ತೆ ಕುರ್ಚಿಗಾಗಿ ದೈವದ ಮೊರೆ ಹೋಗ್ತಾರಾ ಎಂದು ಕಾದು ನೋಡಬೇಕಿದೆ. ಇಂದು ಬಜೆಟ್ ಮುಗಿಸಿ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಂದ ಶೃಂಗೇರಿಗೆ ಆಗಮಿಸುವ ಸಾಧ್ಯತೆ ಇದ್ದು, ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಶೃಂಗೇರಿ ಶಾರದಾಂಬೆಯು ಸಿಎಂ ಕುಮಾರಸ್ವಾಮಿ ಅವರ ಕೈ ಹಿಡಿವಳೋ-ಬಿಡುವಳೋ ಎಂದು ಕಾದು ನೋಡಬೇಕಿದೆ.










