ಹಾಸನ- ಮಂಗಳೂರು ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಕೊನೆಗೂ ಸಂಚಾರಕ್ಕೆ ತೆರೆದುಕೊಳ್ಳುತ್ತಿದೆ. ನಾಳೆಯಿಂದ ಎಲ್ಲ ರೀತಿಯ ವಾಹನಗಳಿಗೂ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಶಿರಾಡಿ ಘಾಟ್ ಕಾಂಕ್ರೀಟ್ ಕಾಮಗಾರಿ ಬಳಿಕ ಜುಲೈ 15ರಂದು ರಸ್ತೆಯನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ, ರಸ್ತೆಯ ಅಂಚಿನಲ್ಲಿ ಮಣ್ಣು ಹಾಕುವುದು, ಪ್ರಪಾತ ಇರುವ ಜಾಗಗಳಲ್ಲಿ ತಡೆಗೋಡೆ ಇಲ್ಲದಿರುವುದು ಅಪಾಯಕ್ಕೆ ಕಾರಣವಾಗಿತ್ತು. ಹೀಗಾಗಿ 15 ದಿನಗಳ ಕಾಲ ಘನ ವಾಹನ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು. ಇದೀಗ ಈ ಗಡುವು ಜುಲೈ 30ಕ್ಕೆ ಕೊನೆಗೊಂಡಿದ್ದು ಬಹುತೇಕ ಕಾಮಗಾರಿ ಮುಗಿದಿರುವುದಾಗಿ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಆ.2ರಿಂದ ಎಲ್ಲ ವಾಹನಗಳ ಸಂಚಾರಕ್ಕೂ ಘಾಟ್ ರಸ್ತೆಯನ್ನು ಮುಕ್ತಗೊಳಿಸಲಿದ್ದು ಮಂಗಳೂರು – ಬೆಂಗಳೂರು ಸಂಪರ್ಕ ಸುಲಭವಾದಂತಾಗಿದೆ. ಕಳೆದ ಎಂಟು ತಿಂಗಳಿಂದ ಶಿರಾಡಿ ಘಾಟ್ ಬಂದ್ ಇದ್ದುದರಿಂದಾಗಿ ವಾಹನ ಪ್ರಯಾಣಿಕರು ಚಾರ್ಮಾಡಿ ಮತ್ತು ಮಡಿಕೇರಿ – ಮೈಸೂರು ಹೆದ್ದಾರಿಯಲ್ಲಿ ಕ್ರಮಿಸುತ್ತಿದ್ದರು. ತಡೆಗೋಡೆ ಕಾಮಗಾರಿ ಬಹುತೇಕ ಅಂತಿಮಗೊಂಡಿದ್ದರೂ, ಸಕಲೇಶಪುರ ಭಾಗದಲ್ಲಿ ಇನ್ನೂ ಕೆಲಸ ಅಂತಿಮಗೊಂಡಿಲ್ಲ. ಹೀಗಾಗಿ ಅಲ್ಲಿನ ಸ್ಥಳೀಯರು ಇನ್ನೂ ಆತಂಕದಲ್ಲಿದ್ದಾರೆ.