ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಟ್ರಾಫಿಕ್ ಜಾಮ್…

749
firstsuddi

ಚಿಕ್ಕಮಗಳೂರು: ರಸ್ತೆಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಹತ್ತು ಗಂಟೆಗೂ ಹೆಚ್ಚು ಹೊತ್ತು ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಎಸ್.ಕೆ. ಬಾರ್ಡರ್ ನಲ್ಲಿ ನಡೆದಿದೆ. ಮಂಗಳೂರು-ಶಿವಮೊಗ್ಗ ಹಾಗೂ ಮಂಗಳೂರು-ಕುದುರೆಮುಖ ಸಂಪರ್ಕಿಸುವ ಕಾರ್ಕಳ ಸಮೀಪ ತಡ ರಾತ್ರಿ 12ರ ಸುಮಾರಿನಲ್ಲಿ ಎರಡೂ ರಸ್ತೆಗಳಿಗೆ ಅಡ್ಡಲಾಗಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಇದರಿಂದ ಎರಡೂ ಮಾರ್ಗದ ರಸ್ತೆಗಳು ಬಂದ್ ಆಗಿದ್ದು, ಬೆಳಗ್ಗೆ 10 ಗಂಟೆಯವರೆಗೂ ಪ್ರಯಾಣಿಕರು ರಸ್ತೆಯಲ್ಲಿಯೇ ಕಾದು ಕುಳಿತಿದ್ದು, ಶೃಂಗೇರಿಯ ಸಮೀಪದ ಎಸ್.ಕೆ. ಬಾರ್ಡರ್ ನಲ್ಲಿ 10 ಕಿಲೋ ಮೀಟರ್ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶಿರಾಡಿಘಾಟ್ ಹಾಗೂ ಚಾರ್ಮಾಡಿ ಘಾಟ್ ದೊಡ್ಡ ವಾಹನಗಳಿಗೆ ಪ್ರವೇಶವಿಲ್ಲವಾದ್ರಿಂದ ಕುದುರೆಮುಖದಲ್ಲಿ ಐರಾವತ ಹಾಗೂ ರಾಜಹಂಸ ಬಸ್ ಓಡಾಡಲು ಅವಕಾಶ ಮಾಡಲಾಗಿತ್ತು. ಟ್ಯಾಂಕರ್ ಪಲ್ಟಿಯಿಂದಾಗಿ ಕುದುರೆಮುಖ ಮಾರ್ಗವೂ ಬಂದ್ ಆಗಿದ್ದರಿಂದ ಹತ್ತಾರು ರಾಜಹಂಸ ಹಾಗೂ ಐರಾವತ ಬಸ್ ನ ಪ್ರಯಾಣಿಕರು ಹಾಗೂ ನೂರಾರು ಸಂಖ್ಯೆಯ ವಾಹನ ಸವಾರರು ಇಡೀ ರಾತ್ರಿ ಕುದುರೆಮುಖ ಕಾಲಕಳೆಯೋ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಹೋಗಿ, ಗ್ಯಾಸ್ ಟ್ಯಾಂಕರ್ನ ತೆರೆವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.