ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಮತ್ತು ಭಾರತದ ಬಾಂಧವ್ಯ ಮತ್ತಷ್ಟು ಬಲವಾಗಿ ಬೆಳೆಯುತ್ತಿದೆ ಎಂದು ಶ್ವೇತಭವನ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ರಾಜ್ ಶಾ ಭಾರತೀಯ ವರದಿಗಾರರ ಸಮೂಹಕ್ಕೆ ತಿಳಿಸಿದ್ದಾರೆ.
ಸುದ್ಧಿಗೊಷ್ಟೀಯೊಂದಿಗೆ ಮಾತನಾಡಿದ ಅವರು ಪ್ರಾದೇಶಿಕ ಭದ್ರತಾ ವಿಷಯಗಳು, ವ್ಯಾಪಾರ ಮತ್ತು ಆರ್ಥಿಕತೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ವ್ಯಾಪಕ ಶ್ರೇಣಿಯ ವಲಯಗಳಲ್ಲಿ ಟ್ರಂಪ್ ಅಡಳಿತದ ಅಡಿ ಉಭಯ ದೇಶಗಳ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿ ವೃದ್ದಿಯಾಗುತ್ತಿದೆ.
ಪ್ರಜಾಪ್ರಭುತ್ವ ಬದ್ಧತೆ ಹಾಗೂ ಭಯೋತ್ಪಾದನೆ ನಿಗ್ರಹ ಮೊದಲಾದ ವಿಷಯಗಳಲ್ಲಿ ಈ ಎರಡು ರಾಷ್ಟ್ರಗಳ ದೃಷ್ಟಿಕೋನವೂ ಒಂದೇ ಆಗಿರುವುದರಿಂದ ಭಾರತವು ಸ್ವಾಭಾವಿಕವಾಗಿಯೇ ಅಮೆರಿಕದ ಪರಮಾಪ್ತ ಮಿತ್ರ ರಾಷ್ಟ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಫಿಲಿಪೈನ್ಸ್ ರಾಜಧಾನಿ ಮನಿಲಾದಲ್ಲಿ ಆಸಿಯಾನ್ ಶೃಂಗಸಭೆ ಸಂದರ್ಭದಲ್ಲಿ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ದ್ವಿತೀಯ ದ್ವಿಪಕ್ಷೀಯ ಮಾತುಕತೆ ನಡೆದ ಕೆಲವೇ ಗಂಟೆಗಳ ನಂತರ ಶಾ ಉಭಯ ದೇಶಗಳ ಬಾಂಧವ್ಯ ಬಲವರ್ಧನೆ ಕುರಿತು ಹೇಳಿಕೆ ನೀಡಿದ್ದಾರೆ.