ವಿದೇಶದಲ್ಲಿನ ವಿದ್ಯಾರ್ಥಿಗಳು, ಭಾರತಕ್ಕೆ ದ್ವಿತೀಯ ಸ್ಥಾನ

581

ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಡಬಲ್ ಡಿಜಿಟ್ (ಶೇ.12.3) ಬೆಳವಣಿಗೆ ದಾಖಲಾಗಿದೆ. ಚೀನಾ ಹೊರತುಪಡಿಸಿದರೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 2ನೇ ಅತೀ ದೊಡ್ಡ ಗುಂಪಾಗಿ ಭಾರತ ಗಮನ ಸೆಳೆದಿದೆ. ವರದಿಯೊಂದರ ಪ್ರಕಾರ, 2016ರಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ ಭಾರತದ ದೇಣಿಗೆ 42556 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು.

2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ 1,86,267 ಭಾರತದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರು ಎಂದು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ (ಐಐಇ) ಸಂಸ್ಥೆ ಬಿಡುಗಡೆ ಮಾಡಿದ ವಾರ್ಷಿಕ ‘ಓಪನ್ ಡೋರ್ಸ್’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವ ಚೀನಾ ವಿದ್ಯಾರ್ಥಿಗಳ ಸಂಖ್ಯೆ ಶೇಕಡ 6.8ರಷ್ಟು ಹೆಚ್ಚಳಗೊಂಡಿದೆ. ಅಲ್ಲೀಗ 3,50,755 ವಿದ್ಯಾರ್ಥಿಗಳಿದ್ದಾರೆ.

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಪದವಿ ಹಂತದ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದು ಎಂದು ವರದಿ ಹೇಳುತ್ತದೆ. ಐಐಇ ಪ್ರಕಾರ 2016-17ನೇ ಶೈಕ್ಷಣಿಕ ಸಾಲಿನ ವಿವರ ಹೀಗಿದೆ: ಪದವಿಪೂರ್ವ ಹಂತ-ಶೇಕಡ 11.8, ಪದವಿ ಹಂತ-ಶೇ.56.3, ಇತರ-1.2, ಒಪಿಟಿ (ಆಪ್ಶನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್)-ಶೇ.30.7. ಕಳೆದ ವರ್ಷ ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿನ ಆರ್ಥಿಕತೆಗೆ 42,556 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೊತ್ತದ ಕಾಣಿಕೆ ನೀಡಿದ್ದಾರೆ ಎಂದು ವಾಣಿಜ್ಯ ಇಲಾಖೆಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಐಐಇ ವರದಿ ಹೇಳುತ್ತದೆ.

2016-17ರಲ್ಲಿ, ಸತತ 2ನೇ ವರ್ಷ, ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ದಾಖಲೆಗೈದಿವೆ. ಒಟ್ಟು 10 ಲಕ್ಷದ 80 ಸಾವಿರ ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
2017ರ ಓಪನ್ ಡೋರ್ಸ್ ವರದಿಯನ್ವಯ, ಇದೀಗ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಶೇ.3ರಷ್ಟು ವೃದ್ಧಿಸಿದೆ. ಇದೇ ವೇಳೆ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕ ವಿದ್ಯಾರ್ಥಿಗಳ ಸಂಖ್ಯೆ ಶೇ.4ರಷ್ಟು ಹೆಚ್ಚಳಗೊಂಡಿದೆ.
ಸಾಮಾನ್ಯವಾಗಿ ಚೀನಾ, ಭಾರತ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಕೆನಡಾ, ವಿಯೆಟ್ನಾಂ, ತೈವಾನ್, ಜಪಾನ್, ಮೆಕ್ಸಿಕೊ ಹಾಗೂ ಬ್ರೆಜಿಲ್ ದೇಶಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುತ್ತಾರೆ. ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಅಮೆರಿಕದ ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಟೆಕ್ಸಾಸ್, ಮಸ್ಸಾಚುಸೆಟ್ಸ್, ಇಲಿನೊಯಿಸ್, ಪೆನ್ಸಿಲ್ವೇನಿಯಾ, ಫೋರಿಡಾ, ಒಹಿಯೊ, ಮಿಶಿಗನ್ ಹಾಗೂ ಇಂಡಿಯಾನಾ ಮುಖ್ಯವಾದವು. 2016-17ನೇ ಸಾಲಿನಲ್ಲಿ ಈ ಎಲ್ಲಾ ರಾಜ್ಯಗಳಲ್ಲಿ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
ವಿದೇಶೀ ವಿದ್ಯಾರ್ಥಿಗಳು ಹೇಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುತ್ತಾರೋ ಹಾಗೆಯೇ ಅಮೆರಿಕದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳುತ್ತಾರೆ. 2015-16ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಅಮೆರಿಕದ ವಿದ್ಯಾರ್ಥಿಗಳು ಇಂಗ್ಲೆಂಡ್, ಇಟಲಿ, ಸ್ಪೇನ್, ಫ್ರಾನ್ಸ್ ಹಾಗೂ ಜರ್ಮನಿಗೆ ತೆರಳಿದ್ದಾರೆ ಎಂದು ವರದಿ ಹೇಳುತ್ತದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕದ ವಿದ್ಯಾರ್ಥಿಗಳ ಸಂಖ್ಯೆ 4,438ರಿಂದ 4,181ಕ್ಕೆ ಕುಸಿತ ಕಂಡಿದೆ. ಅಂತೆಯೇ ಭಾರತದ ರ್ಯಾಕಿಂಗ್ ಕೂಡ 15ಕ್ಕೆ ಕುಸಿದಿದೆ.

LEAVE A REPLY

Please enter your comment!
Please enter your name here