ಬೆಂಗಳೂರು: ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಾ.ಜಿ ಪರಮೇಶ್ವರ್ ಅವರು ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಅವರೇ ಮೊದಲು ಕೊಡಗಿಗೆ ಬಂದು 18 ಎಂಪಿಗಳೊಂದಿಗೆ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಉಸ್ತುವಾರಿ ಸಚಿವರ ಮೇಲೆ ಹರಿಹಾಯ್ದರೆ ಎಷ್ಟು ಸರಿ? ಎಂದ ಅವರು ನಂತರ ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿಯನ್ನು ತರಿಸಿಕೊಳ್ಳುತ್ತೇವೆ. ನಮ್ಮ ಅಂದಾಜಿನ ಪ್ರಕಾರ 3000 ಕೋಟಿ ಅಗತ್ಯವಿದ್ದು, ಕೇಂದ್ರದಿಂದ 2000 ಕೋಟಿ ಕೇಳಿದ್ದೇವೆ. ಆದರೆ ಕೇಂದ್ರದಿಂದ ನಮಗೆ ಇದುವರೆಗೂ ಒಂದು ರೂಪಾಯಿ ಬಂದಿಲ್ಲ. ನಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಅವರೇ ನೆರವಾಗಬೇಕು. ಎನ್ ಡಿ ಆರ್ ಎಫ್ ಸೇನೆ ಕಳುಹಿಸಿ ಸಹಾಯ ಮಾಡಿದ್ದು, ಅದನ್ನು ಹೊರತು ಪಡಿಸಿ ಆರ್ಥಿಕ ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ಸ್ಪಂದಿಸಿಲ್ಲ. ಕೇರಳಕ್ಕೆ 500 ಕೋಟಿ ಕೊಟ್ಟಂತೆ ನಮಗೂ ಕೇಂದ್ರ ಹಣ ಸಹಾಯ ಮಾಡಲಿ ಎಂದರು.