ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯಂತೆ ಪ್ರತಿ ವರ್ಷ ಭಾರತದಲ್ಲಿ ಬರೋಬ್ಬರಿ 40,000 ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಇವರಲ್ಲಿ ಹೆಚ್ಚು ಕಡಿಮೆ 11,000 ಮಕ್ಕಳ ಪತ್ತೆ ಮಾತ್ರ ಸಾಧ್ಯವಾಗುತ್ತಿದೆ. ಹಾಗಾದರೆ ಸ್ವತಂತ್ರ ಭಾರತದ ಇನ್ನುಳಿದ ಮಕ್ಕಳ ಸ್ಥಿತಿ ಏನು ಎನ್ನುವ ಪ್ರಶ್ನೆಗೆ ದೊರಕುವ ಉತ್ತರ ಆಘಾತಕಾರಿ. ಇವರಲ್ಲಿ ಅತಿ ಹೆಚ್ಚು ಪ್ರತಿಶತ ಮಕ್ಕಳು ಮಾನವ ಕಳ್ಳಸಾಗಣೆ ಹಾಗೂ ಮಾರಾಟ ಜಾಲದ ಮುಷ್ಠಿಯಲ್ಲಿ ಸಿಲುಕಿ ನಲಗುತ್ತಿದ್ದಾರೆ.ಮೊನ್ನೆ ತಾನೆ ಬಿಹಾರದ ಒಂದು ಸೇವಾ ಸಂಸ್ಥೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಹಾಗೂ ಅವರಲ್ಲಿ ಒಬ್ಬ ಬಾಲಕಿಯ ಹತ್ಯೆಯ ಸುದ್ದಿ ಬಿತ್ತರವಾಗಿತ್ತು.ಉಸಿರು ಬಿಗಿಹಿಡಿದು ಈ ಮುಗ್ಧ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿಚಾರವನ್ನು ಜೀರ್ಣಿಸಿಕೊಳ್ಳುವಷ್ಟರಲ್ಲೇ ಅದೇ ಬಿಹಾರದ ಪಾಟ್ನಾದಿಂದ ವ್ಯಕ್ತಿಯೊಬ್ಬ ಹನ್ನೆರಡರಿಂದ ಹದಿನಾಲ್ಕು ವರ್ಷದ ಬಡ ಕುಟುಂಬದ 12 ಬಾಲಕಿಯರನ್ನು ಕೆಲಸ ಕೊಡಿಸುವೆನೆಂದು ವಂಚಿಸಿ ಉತ್ತರ ಪ್ರದೇಶದ ನಗರವೊಂದರ ವೇಶ್ಯವಾಟಿಕೆ ಜಾಲಕ್ಕೆ ಮಾರಲು ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆಯೇ ಪೊಲೀಸರಿಂದ ಬಂಧಿತನಾದ.
ಬೆಳಕಿಗೆ ಬರುವಂತಾ ಇಂತಹ ಪ್ರಕರಣಗಳು ಒಂದೆಡೆಯಾದರೆ ಈ ಕಂದಮ್ಮಗಳ ವಯೋಸಹಜ ಮುಗ್ಧತೆ, ಉತ್ಸಾಹ ಇವೆಲ್ಲವನ್ನೂ ರಕ್ಷಕರೆಂಬಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ಅದೆಷ್ಟೋ ಸಮಾಜ ಸೇವಾ ಸಂಸ್ಥೆಗಳು,ಲೈಂಗಿಕ ಶೋಷಣೆಯ ರೂಪದಲ್ಲಿ ಹೊಸಕಿ ಹಾಕುತ್ತಿವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿನ ಹಿಂದುÀಳಿದ ಬಡ ಕುಟುಂಬದ ಹಲವಾರು ಹೆಣ್ಣು ಮಕ್ಕಳಿಗೆ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಷ್ಟೋ ಸೇವಾ ಸಂಸ್ಥೆಗಳು ಉಚಿತ ವಸತಿ ಮತ್ತು ವಿದ್ಯಾಭ್ಯಾಸ ನೀಡುತ್ತಿವೆ.ಆದರೆ ಹಲವಾರು ಕಡೆ ಈ ಮುದ್ದಾದ ಮಕ್ಕಳ ಮೇಲೆ ನಿರಂತರ ಲೈಂಗಿಕ ಶೋಷಣೆಯಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. ನಗು, ತುಂಟಾಟ, ಇವಷ್ಟನ್ನೇ ತಿಳಿದಿರುವ ಮಕ್ಕಳು ತಮ್ಮ ಮೇಲಾಗುತ್ತಿರುವುದೇನು ಎನ್ನುವುದರ ಅರಿವಿಲ್ಲದೆ ಖಿನ್ನತೆಗೆ ಜಾರುತ್ತಿದ್ದಾರೆ. ಕೆಲವೊಮ್ಮೆ ಶಾಲೆಯಲ್ಲಿ ಹೊಟ್ಟೆ ನೋವೆಂದು ಒದ್ದಾಡುವ ಈ ಪುಟ್ಟ ಹೆಣ್ಣು ಮಕ್ಕಳನ್ನು ವಿಚಾರಿಸಿದಾಗ ಅವುಗಳ ಮೇಲಾಗಿರುವ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತವೆ.
ಅಂತರಾಷ್ಟ್ರೀಯ ಸಮೀಕ್ಷೆ ಒಂದರ ಪ್ರಕಾರ ವಾಸಿಸಲು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಯಾವುದೇ ಸ್ಥಾನ ಪಡೆಯದಿರುವುದಕ್ಕೆ ಇದೇ ಮುಖ್ಯ ಕಾರಣ ಎಂಬುದು ದುರಂತದ ಸಂಗತಿಯಾಗಿದೆ. ಹೌದು, ಕರ್ನಾಟಕದಲ್ಲಿ ಕೂಡ ದಿನೇ ದಿನೇ ಮಾನವ ಕಳ್ಳ ಸಾಗಣೆ ಮತ್ತು ಮಾರಾಟ ಯಾವುದೇ ಎಗ್ಗಿಲ್ಲದೆ ನಡೆದಿದೆ.ಮೊನ್ನೆಯಷ್ಟೆ ಕರ್ನಾಟಕ ಹೈಕೋರ್ಟ್ ನ್ಯಾಯ ಮೂರ್ತಿಗಳನ್ನೊಳಗೊಂಡ ಪೀಠ ರಾಜ್ಯದ ಕಾನೂನು ವ್ಯವಸ್ಥೆಯನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದೆ. ನಾವೆಲ್ಲರೂ 72ನೇ ಸ್ವಾತಂತ್ರ್ಯಾಚರಣೆಯ ಸಂಭ್ರಮದಲ್ಲಿ ಬೀಗುತ್ತಿದ್ದೇವೆ. ದಾಸ್ಯ ವಿಮುಕ್ತಿ ನಿಜಕ್ಕೂ ನೆರವೇರಿದೆಯೊ? ವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಎಷ್ಟರ ಮಟ್ಟಿಗೆ ಸಫಲವಾಗಿದೆ? ಬಲಹೀನರ, ಮುಗ್ಧ ಮಕ್ಕಳ, ನಿತ್ಯ ಸಮಾಧಿಯ ಮೇಲೆ ನಮ್ಮ ಆಚರಣೆಗಳು ಡಂಬಾಚಾರದಂತೆ ತೋರುತ್ತಿರುವುದರಲ್ಲಿ ಸಂಶಯವೇ ಇಲ್ಲ. ನೂರಾರು ಮಹಾ ಪುರುಷರು ತ್ಯಾಗ ಬಲಿದಾನದ ಫಲವಾಗಿ ದೊರಕಿದ ಸ್ವಾತಂತ್ರ್ಯ ಆರ್ಥಿಕವಾಗಿ,ಸಾಮಾಜಿಕವಾಗಿ, ಪ್ರತಿಯೊಬ್ಬ ನಾಗರಿಕನಿಗೂ ಸಿಗುವಂತಾಗಬೇಕು. ಭವ್ಯ ಭಾರತದ ಮಕ್ಕಳು ತಮ್ಮ ಬಾಲ್ಯವನ್ನು ಸ್ವಚ್ಛಂದವಾಗಿ ಕಳೆಯುವಂತಾಗಬೇಕು ಆಗಷ್ಟೆ ಸ್ವಾತಂತ್ರ್ಯಾಚರಣೆ ಅರ್ಥಪೂರ್ಣವಾಗುತ್ತದೆ.