ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೇ ಶಿಕ್ಷಣವಂತರಾಗಬೇಕು. ಎಸ್.ಪಿ. ಅಣ್ಣಾಮಲೈ…

525
firstsuddi

ಚಿಕ್ಕಮಗಳೂರು-  ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು, ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಸಲಹೆ ನೀಡಿದರು.
ನಗರದ ಸವಿತಾ ಸಮಾಜದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸವಿತಾ ಸಮಾಜ ಟ್ರಸ್ಟ್ ವತಿಯಿಂದ ನೀಡಲಾದ ಉಚಿತ ಪಠ್ಯಪುಸ್ತಕ ಮತ್ತು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಅವರು ಮಾತನಾಡಿದರು.ಹಿಂದುಳಿದ ವರ್ಗಗಳ ಮಕ್ಕಳು ಕುಲ ಕಸುಬಿಗೆ ಅಂಟಿಕೊಳ್ಳಬಾರದು. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳದೇ ಶಿಕ್ಷಣವಂತರಾಬೇಕು ಎಂದ ಅವರು ಹಾಗಾದಾಗ ಮಾತ್ರ ಹಿಂದುಳಿದ ವರ್ಗಗಳು ಅಭಿವೃದ್ದಿಯಾಗುತ್ತವೆ ಎಂದರು.ಹಣವನ್ನು ಸಂಪಾದಿಸಬಹುದು ಆದರೆ ವಿದ್ಯೆಯನ್ನು ಸಂಪಾದಿಸಲು ಸಾಧ್ಯವಿಲ್ಲ ಅದನ್ನು ಶ್ರದ್ದೆ ಮತ್ತು ಪರಿಶ್ರಮದಿಂದ ಮಾತ್ರ ಗಳಿಸಬಹುದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸವಿತಾ ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಎ.ಬಿ.ಹರೀಶ್ ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ಉಚಿತ ಪಠ್ಯ ಪುಸ್ತಕ ಮತ್ತು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 7 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರೋತ್ಸಾಹ ಧನ ನೀಡಲಾಯಿತು, 100 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.ಸವಿತಾ ಸಮಾಜ ಸೇವಾ  ಟ್ರಸ್ಟಿನ ಕಾರ್ಯದರ್ಶಿ ಎ.ಹರೀಶ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಸ್.ಎನ್.ಮಹಾಲಿಂಗಪ್ಪ, ಸಮುದಾಯದ ಹಿರಿಯ ಬಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ಟಿ.ಲಕ್ಷ್ಮಿಕಾಂತ್, ಸಂಘದ ನಿರ್ದೇಶಕ ಶ್ರೀಧರ್ ಮೋಹನ್, ಅನಿತಾ ಉಪಸ್ಥಿತರಿದ್ದರು.