ಅಕ್ರಮ ಗಣಿಗಾರಿಕೆ ತಡೆಯಲು ಹೋದ ಪೊಲೀಸ್ ಅಧಿಕಾರಿ ಮೇಲೆ ಟ್ರಕ್ ಹರಿಸಿ ಹತ್ಯೆ!

85
firstsuddi

ಚಂಡೀಗಢ : ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಡಿಎಸ್ ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಮೃತ ದುರ್ದೈವಿ. ನುಹ್ ನ ಪಚ್ಗಾಂವ್ ಬಳಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಆಧಾರದ ಮೇಲೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಈ ಸ್ಥಳಕ್ಕೆ ಇಂದು ಪೊಲೀಸ್ ತಂಡದೊಂದಿಗೆ ಸುರೇಂದ್ರ ಸಿಂಗ್ ಬಿಷ್ಣೋಯ್ ತೆರಳಿದ್ದರು.

ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಕಂಡ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಸ್ ಪಿ ಸುರೇಂದ್ರಸಿಂಗ್ ಅವರು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಟ್ರಕ್ ನ ಚಾಲಕ ಅವರ ಮೇಲೆ ಟ್ರಕ್ ನ್ನು ಹರಿಸಿದ್ದರಿಂದ ಡಿಎಸ್ ಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಎಸ್ ಪಿ ಜೊತೆಯಿದ್ದ ಮತ್ತಿಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದರಿಂದ ಘಟನೆಯಿಂದ ಪಾರಾಗಿದ್ದಾರೆ.

ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಇದೀಗ ಶೋಧಕಾರ್ಯ ಆರಂಭಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಭೇಟಿ ನೀಡಿದ್ದಾರೆ.