ಅಜ್ಜಿಯ ಮನೆಯಲ್ಲಿ ಕಳೆದ ಬೇಸಿಗೆ ರಜೆಯ ನೆನಪು…

703
firstsuddi
  • ರಾಘವೇಂದ್ರ ಕೆಸವಳಲು

ಬೇಸಿಗೆ ರಜೆಯ ಮೋಜಿನಲ್ಲಿ ಕಳೆದು ಹೋಗಿದ್ದ ಪುಟ್ಟ ಮಕ್ಕಳು ಮುದುಡಿದ ಮನಸ್ಸಿನೊಂದಿಗೆ ಶಾಲೆಗೆ ಹೋಗಲು ತಯಾರಿ ನಡೆಸಿವೆ. ಹಿಂದೆಲ್ಲಾ ಸಂಪೂರ್ಣ ಎರಡು ತಿಂಗಳ ರಜಾ ಅವಧಿ ಆದರೆ ಇಂದು ಕುಂಠಿತಗೊಂಡಿರುವ ರಜಾ ಅವಧಿಯ ಜೊತೆಗೆ ಬೇಸಿಗೆ ಶಿಬಿರ, ವಿವಿಧ ರೀತಿಯ ಕೋಚಿಂಗ್ ಎನ್ನುವ ಕಲಿಕೆಯ ಬೇಲಿ ಹೀಗಿದ್ದೂ ಕೂಡಾ ಅಳಿದುಳಿದ ರಜಾದಿನಗಳನ್ನು ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುತ್ತಿರುವ ಮಕ್ಕಳು ಸ್ವಚ್ಛಂದ ವಾತಾವರಣದಲ್ಲಿ ತಮ್ಮಿಷ್ಟದಂತೆ ಆಡುವ, ಅಜ್ಜ-ಅಜ್ಜಿಯಂದಿರ ಮನೆಗೆ ಹೋಗಿ ಅಲ್ಲಿ ಓರಗೆಯ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಟಿ.ವಿ ಮುಂದೆ ಆರಂಭವಾಗುವ ಅವರ ದಿನಚರಿ ಮೊಬೈಲ್ ಗೇಮ್‍ಗಳೊಂದಿಗೆ ಕೊನೆಯಾಗುತ್ತದೆ. ಹೆಚ್ಚೆಂದರೆ ತಂದೆ ತಾಯಿಯರೊಂದಿಗೆ ಒಂದಿಷ್ಟು ಪ್ರೇಕ್ಷಣಿಯ ಸ್ಥಳಗಳಿಗೆ, ಬಂಧು ಬಾಂಧವರಲ್ಲಿನ ಶುಭ ಸಮಾರಂಭಗಳಿಗೆ ಹೋಗಿ ಬಂದರೆ ಮುಗಿಯಿತು.

ಹಿಂದೆ ರಜೆಯ ಆರಂಭದೊಡನೆ ನಾವೆಲ್ಲಾ ಆಹ್ವಾನಿಸಿದ ಅತಿಥಿಗಳಂತೆ ಅಜ್ಜನ ಮನೆಯಲ್ಲಿ ಹಾಜರ್. ಕಸಿನ್ಸ್ ಅದೇ ಊರಿನ ಫ್ರೆಂಡ್ಸ್ ಹೀಗೆ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಹತ್ತಾರು ಮಕ್ಕಳು ಒಟ್ಟಾಗಿ ಆಡಿದ ಮರಕೋತಿ ಆಟ, ಲಗೋರಿ, ಕಣ್ಣಾ ಮುಚ್ಚಾಲೆ ಆಟಗಳು ಬದುಕಿನ ಎಲ್ಲಾ ಸಂಭ್ರಮಕ್ಕೂ ಮಿಗಿಲು ಗೆಳೆಯರ ದಂಡಿನೊಂದಿಗೆ ಆಸುಪಾಸಿನ ಕಾಡಿನೊಳಗೆ ಹೋಗಿ ನೇರಳೆ ಹಣ್ಣು, ಚೊಟ್ಟೆ ಹಣ್ಣು ಹೀಗೆ ಹಲವಾರು ಕಾಡಿನ ಅಪರೂಪದ ಹಣ್ಣುಗಳನ್ನು ಸಂಗ್ರಹಿಸಿ ತಿನ್ನುತ್ತಿದ್ದು, ಹಳ್ಳದಲ್ಲಿ ಈಜಾಡುತ್ತಿದ್ದುದು ಬೇಸಿಗೆ ರಜೆಯ ಅಡ್ವೆಂಚರ್‍ಗಳ ಅತಿಮುಖ್ಯ ಭಾಗಗಳು. ಗೆಳೆಯರೊಂದಿಗೆ ಪರಸ್ಪರ ಮುನಿಸು, ಜಗಳವಿಲ್ಲದೆ ಕಳೆದ ದಿನಗಳೇ ಇರುತ್ತಿರಲಿಲ್ಲ. ಆದರೆ ಜಗಳದೊಂದಿಗೆ ಬೆಸೆಯುತ್ತಿದ್ದ ಗೆಳೆತನ ಮತ್ತಷ್ಟು ಸ್ಟ್ರಾಂಗ್ ಆಗಿ ಮಾರ್ಪಡುತ್ತಿತ್ತು. ಸಂಪೂರ್ಣ ರಜೆ ಮುಗಿಯುವವರೆಗೂ ಅಜ್ಜನ ಮನೆಯನ್ನು ಬಿಟ್ಟು ಯಾರೊಬ್ಬರು ಕದಲುತ್ತಿರಲಿಲ್ಲ. ಅಜ್ಜಿ, ಅತ್ತೆಯಂದಿರೂ ಕೂಡಾ ಯಾವುದೇ ಬೇಸರವಿಲ್ಲದೇ ನಮ್ಮೆಲ್ಲರ ಬೇಕು ಬೇಡಗಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು
ಸುಡುವ ಬಿಸಿಲಿನಲ್ಲಿ ಲೆಕ್ಕವಿಲ್ಲದಷ್ಟು ತರಚುಗಾಯಗಳು, ಮಂಡಿ, ಮೊಣಕ್ಕೆ ಮುರಿತ ಇದಾವುದನ್ನೂ ಲೆಕ್ಕಿಸದೇ ಆಡಿದ ಕ್ಷಣಗಳು ಇಂದು ನೆನಪು ಮಾತ್ರ.
ಇಂದಿನ ಮಕ್ಕಳು ಕೂಡಾ ಅವರದ್ದೇ ಆದ ಒಂದಷ್ಟು ನೆನಪಿನ ಬುತ್ತಿಗಳನ್ನು ತಮ್ಮೊಂದಿಗೆ ಈ ರಜಾ ಅವಧಿಯಲ್ಲಿ ಕಟ್ಟಿಕೊಂಡಿದ್ದಾರೆ. ಮುಂಬರುವ ಬೇಸಿಗೆ ರಜೆವರೆಗೂ ಅದನ್ನು ಮೆಲಕು ಹಾಕುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ಆರಂಭವಾದ ಮುಂಗಾರಿನೊಂದಿಗೆ ಶೈಕ್ಷಣಿಕ ವರ್ಷಾರಂಭ ಕೂಡಾ ಆಗಿದೆ. ಒಲ್ಲದ ಮನಸ್ಸಿನೊಂದಿಗೆ ಶಾಲೆಗೆ ಅಡಿಯಿಟ್ಟರೂ ಕ್ರಮೇಣ ಅದಕ್ಕೆ ಹೊಂದಿಕೊಳ್ಳುವ ಸ್ವಭಾವ ಮಕ್ಕಳದ್ದು, ಮೊಟ್ಟಮೊದಲು ಶಾಲೆಗೆ ಕಾಲಿಡುವ ಪ್ರಿ.ಕೆ.ಜಿ ಮಕ್ಕಳೂ ಕೂಡಾ ಮೊದಲಲ್ಲಿ ಶಾಲೆಯ ದರ್ಶವಾದೊಡನೆ ರಂಪಾಟ ಮಾಡಿದರೂ ಕ್ರಮೇಣ ಒಗ್ಗಿಕೊಳ್ಳುತ್ತವೆ.
ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ಅಡಿಯಿಡುತ್ತಿರುವ ಎಲ್ಲಾ ವಯೋಮಾನದ ಮಕ್ಕಳಿಗೂ ಈ ಮೂಲಕ All the best ಹೇಳುತ್ತಾ ಶುಭಕೋರೋಣ.