ಡಾ. ಎಂ.ಎಸ್. ಮಣಿ
ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಆರ್ಥಿಕ ತಜ್ಞ ನಾನಲ್ಲ. ಹಸಿವಿನ ಹಾಹಾಕಾರ ಅಡಗಿಸಲು ಗಣಿತದ ಬಗ್ಗೆ ಆಸಕ್ತಿ ಬೆಳೆಸಿಕೊಡಿದ್ದವನು. ಹೌದು, ನನ್ನ ಬಾಲ್ಯದ ದಿನಗಳು ಸುಂದರವಾಗಿರಲಿಲ್ಲ. `ಮಧ್ಯಾಹ್ನದ ಊಟ’ ಎಂಬುದು ಮರೀಚಿಕೆಯಾಗಿತ್ತು. ಈಗಿನಂತೆ `ಮಧ್ಯಾಹ್ನದ ಬಿಸಿಯೂಟ’ ಶಾಲೆಯಲ್ಲಂದು ನೀಡುತ್ತಿರಲಿಲ್ಲ. ಹೀಗಾಗಿ ಶಾಲೆಗೆ ಬರುವಾಗ, ಮಾವಿನಕಾಯಿ, ನೆಲ್ಲಿಕಾಯಿ, ನೇರಳೆಹಣ್ಣು ಹೆಕ್ಕಿ ತಂದಿರುತ್ತಿದ್ದೆ. ಊಟದ ಸಮಯಕ್ಕೆ ಉಪ್ಪು-ಖಾರ ಮಿಶ್ರಿತ ನೆಲ್ಲಿಕಾಯಿ, ಮಾವಿನಕಾಯಿ, ಕೊಬ್ಬರಿಕಾಯಿ, ಎಲಚಿಹಣ್ಣು, ಬೇಲದಹಣ್ಣು, ಮರಗೆಣಸು ಮಾರಲು ಕೆಲವರು ಬರುತ್ತಿದ್ದರು. ಇವರಿಂದ ಉಪ್ಪು-ಖಾರ ಪಡೆದು ನನ್ನಲ್ಲಿದ್ದ ಮಾವಿನಕಾಯಿ, ನೆಲ್ಲಿಕಾಯಿ, ನೇರಳೆಹಣ್ಣು ತಿನ್ನುತ್ತಿದ್ದೆ. ಮಧ್ಯಾಹ್ನ ಮೂರು ಘಂಟೆಯ ಹೊತ್ತಿಗೆ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳುತ್ತಿತ್ತು. ಇದೇ ಸಮಯಕ್ಕೆ ಗಣಿತದ ಪಿರಿಯೆಡ್ ಕೂಡ ಇರುತ್ತಿತ್ತು. ಚಿತ್ರದುರ್ಗ ಮೂಲದ ಗಣಿತದ ಮೇಷ್ಟ್ರು ಲೆಕ್ಕವನ್ನು ಪ್ರೋತ್ಸಾಹಿಸಿ ಕಲಿಸುತ್ತಿದ್ದರು. ಅವರು ಹೇಳಿಕೊಟ್ಟ ಲೆಕ್ಕವನ್ನು ಯಾರು ಮೊದಲಿಗೆ ಮಾಡಿ ತೋರಿಸುವರೋ ಅವರಿಗೆ ಚಾಕ್‍ಲೇಟ್ ನೀಡುವ ಪರಿಪಾಠ ಕೂಡ ಇಟ್ಟುಕೊಂಡಿದ್ದರು. ಇದು ಲೆಕ್ಕವನ್ನು ನನ್ನಿಂದ ಮೊದಲಿಗೆ ಮಾಡಿಸುತ್ತಿತ್ತು. ಹೀಗೆ ಹೊಟ್ಟೆ ಉರಿಯ ಶಮನಕ್ಕಾಗಿ ಲೆಕ್ಕದಲ್ಲಿ ಮುಂದಿದ್ದರೂ, ವಿಜ್ಞಾನ ನನ್ನಲ್ಲಿ ಆಸಕ್ತಿ ಮೂಡಿಸಲೇ ಇಲ್ಲ. ಇತಿಹಾಸದ ಅಭ್ಯಾಸದತ್ತ ನನ್ನನ್ನು ತಳ್ಳಿತು. ಅಲ್ಲಿ ಪ್ರೊ. ಪಾಲಾಕ್ಷ ಅವರು ಬರೆದ ಅರ್ಥಶಾಸ್ತ್ರ ಸೆಳೆಯಿತಾದರೂ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಲು ಸಾಧ್ಯವಾಗಲಿಲ್ಲ. ಬಹುಶಃ ಇದೇ ಇವತ್ತಿನ ಆರ್ಥಿಕ ವಿಚಾರಗಳನ್ನು ನಿಮ್ಮ ಮುಂದಿಡಲು ಪ್ರೇರೇಪಿಸಿದೆ.
ಭಾರತದ ಆರ್ಥಿಕತೆಯು ತೀವ್ರ ಶೋಚನೀಯ ಸ್ಥಿತಿಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಇಲ್ಲ. ಕಳೆದ 5-6 ವರ್ಷಗಳಿಂದ ನಾವು ಒಂದಷ್ಟು ಅಭಿವೃದ್ಧಿಗೆ ಸಾಕ್ಷಿಯಾಗಬೇಕಿತ್ತು. ಯಾವ ಅಂಕಿ-ಅಂಶಗಳನ್ನು ನಂಬಬೇಕು ಎಂಬುದರ ಬಗ್ಗೆ ಭಾರತದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ತನಗೆ ಅನುಕೂಲಕರವಲ್ಲದ ಅಂಕಿ-ಅಂಶಗಳ ಬಗ್ಗೆ ಸರ್ಕಾರವು ಬೇರೆಯದೆ ಆದ ನಿಲವನ್ನು ತಳೆದಿದೆ.
2008ರಿಂದಲೂ ವಿದೇಶಿ ಹೂಡಿಕೆಯನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾ ಬರಲಾಗಿದೆ. 2016ರ ಬಳಿಕೆ ದೇಶದ ಆರ್ಥಿಕತೆಯು ಅಪಾಯಕರ ರೀತಿಯಲ್ಲಿ ಹಿಮ್ಮುಖ ತಿರುವು ಪಡೆದಿದೆ. ಆರ್ಥಿಕ ಕಾರ್ಯಕ್ಷಮತೆಯಲ್ಲಿ ವಿಫಲವಾಗಿದ್ದ ಕಾರಣಕ್ಕೆ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಪ್ರಚಾರದ ವಿಷಯವನ್ನೇ ಬದಲಾಯಿಸಬೇಕಾಯಿತು. ದೇಶದ ಭದ್ರತೆ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿತು. ಮನಮೋಹನ್ ಸಿಂಗ್ ನಿಪುಣ ಅರ್ಥಶಾಸ್ತ್ರಜ್ಞ. ಈ ವಿಷಯದಲ್ಲಿ ಮೋದಿ ಇದಕ್ಕೆ ಸಂಪೂರ್ಣ ತದ್ವಿರುದ್ಧ ವ್ಯಕ್ತಿತ್ವ ಹೊಂದಿದ್ದಾರೆಂದು ಭಾಜಪ ಸಂಸದ ಸುಬ್ರಮಣಿಯನ್‍ಸ್ವಾಮಿ `ರಿಸೆಟ್; ರಿಗೆನಿಂಗ್ ಇಂಡಿಯಾಸ್ ಇಕನಾಮಿಕ್ ಲೆಗಸಿ’ ಎಂಬ ತಮ ಹೊಸ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಒಂದರ ನಂತರ ಒಂದರಂತೆ ವಿವಿಧ ಕ್ಷೇತ್ರಗಳು ಗಂಭೀರ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ಬಿಂಬಿಸುವ ಅಂಕಿ-ಅಂಶಗಳು ದಿನನಿತ್ಯ ಪ್ರಕಟವಾಗುತ್ತಿದ್ದರೂ, ಕೇಂದ್ರ ಸರ್ಕಾರ ಮಾತ್ರ ಈ ಎಲ್ಲವನ್ನೂ ನಿರಾಕರಿಸುವ ಧೋರಣೆ ಅನುಸರಿಸುತ್ತಿದೆ. ಬಿಜೆಪಿಯ ಅತ್ಯುನ್ನತ ವೇದಿಕೆಗಳಲ್ಲಿ ದೇಶದ ಆರ್ಥಿಕತೆಯ ದಿಕ್ಕಿನ ಬಗ್ಗೆ ಗಂಭೀರ ಚರ್ಚೆ ಯಾವತ್ತೂ ನಡೆದೇ ಇಲ್ಲ. ಬಿಜೆಪಿ ವಿಶಿಷ್ಟ ಆರ್ಥಿಕತೆ ನೀತಿಯ ಪಕ್ಷ ಎಂದು ಜನರು ಗುರುತಿಸದಿದ್ದುದೇ ಅಟಲ್ ಬಿಹಾರಿ ವಾಜಪೆಯಿ ನೇತೃತ್ವದಲ್ಲಿ ನಡೆದ `ಭಾರತ ಪ್ರಕಾಶಿಸುತ್ತಿದೆ’ ಅಭಿಯಾನ ವಿಫಲವಾಗಲು ಕಾರಣ ಎಂದು ಕೇಂದ್ರ ಹಣಕಾಸು ಸಚಿವೆಯ ಪತಿ ಪರಕಾಲ ಪ್ರಭಾಕರನ್ `ದಿ ಹಿಂದೂ’ ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಬಡ ಕಾರ್ಮಿಕರನ್ನು ರಕ್ಷಿಸಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಪ್ರತಿ ಪ್ರಜೆಗೂ ಒಳಿತಾಗಲಿ, ಪವಿತ್ರ ಆರ್ಥಿಕತೆಯು ರಾಕ್ಷಸ ಆರ್ಥಿಕತೆಯನ್ನು ಮಣಿಸಲಿ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದಾರೆ.
ಆರ್ಥಿಕ ಹಿಂಜರಿಕೆಯ ಹೊಡೆತ ಕರ್ನಾಟಕದಲ್ಲೂ ದೊಡ್ಡ ಪ್ರಮಾಣದಲ್ಲಿ ಆಗಲಿದೆ. ಕೇಂದ್ರ ಸರ್ಕಾರದ ತೆರಿಗೆ ನೀತಿ ಹಾಗೂ ದೇಶದಲ್ಲಿ ಉಂಟಾಗಿರುವ ಆರ್ಥಕ ಹಿಂಜರಿತದಿಂದಾಗಿ ಕರ್ನಾಟಕದ ಕೈಗಾರಿಕೆಗಳು ನಷ್ಟದಲ್ಲಿವೆ. ಇದರ ಪರಿಣಾಮವಾಗಿ ಸದ್ಯದಲ್ಲೇ ರಾಜ್ಯದಲ್ಲಿ 15ರಿಂದ 20 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆಂದು. ಇದನ್ನು ಕಾಸಿಯಾ ಅಧ್ಯಕ್ಷರು ಕೂಡ ಅನುಮೋದಿಸಿದ್ದಾರೆ.
ಆರ್ಥಿಕತಜ್ಞರು, ವಿವಿಧ ಕ್ಷೇತ್ರದ ತಜ್ಞರು `ಆರ್ಥಿಕ ಹಿಂಜರಿತ’ ಬಗ್ಗೆ ಹೇಳುತ್ತಿದ್ದಾರೆ. ಆದರೆ `ದೇಶದಲ್ಲಿ ಯಾವುದೇ ರೀತಿಯ ಆರ್ಥಿಕ ಕುಸಿತ ಉಂಟಾಗಿಲ್ಲ. ಒಂದು ವೇಳೆ ಆರ್ಥಿಕ ಕುಂಠಿತ ಎದುರಾಗಿದ್ದೇ ಆಗಿದ್ದಲ್ಲಿ, ಬೆಳ್ಳಿತೆರೆಗೆ ಅಪ್ಪಳಿಸಿದ ಮೂರು ಬಾಲಿವುಡ್ ಚಿತ್ರಗಳು ಅಕ್ಟೋಬರ್ 2ರ ಒಂದೇ ದಿನ 120 ಕೋಟಿ ರೂ. ಆದಾಯ ಗಳಿಸಲು ಹೇಗೆ ಸಾಧ್ಯ?’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಈ ಹೇಳಿಕೆ ಟೀಕೆಗೆ ಗುರಿಯಾಗಿದ್ದೇ ತಡ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಇನ್ನೊಂದೆಡೆ ವಾಹನಗಳ ಎಂಜಿನ್‍ಗಳನ್ನು ಬಿಎಸ್-6ಗೆ ಬದಲಾವಣೆ ಮಾಡುವ ವಿಷಯ, ನೋಂದಣಿ ಶುಲ್ಕದಲ್ಲಿ ಏರಿಕೆ ಹಾಗೂ ಹೊಸ ತಲೆಮಾರಿನ ಜನ ವಾಹನ ಖರೀದಿ ಮಾಡಿ ಇಎಂಐ ಕಟ್ಟುವುದಕ್ಕಿಂತಲೂ ಓಲಾ, ಉಬರ್ ಬಳಸುವುದಕ್ಕೇ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ವಾಹನಗಳ ಮಾರಾಟದಲ್ಲಿ ಕುಸಿತವಾಗಿದೆ. ಜನ ತಮ್ಮ ಯೋಚನಾ ಶೈಲಿ ಬದಲಾಯಿಸಬೇಕೆಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಕರೆ ಕೊಟ್ಟಿದ್ದಾರೆ.
ವಿವಿಧ ಆಟೋಮೊಬೈಲ್ ಕಂಪನಿಗಳು ವಾಹನಗಳನ್ನು ತಯಾರಿಸಿ ಸಂಗ್ರಹಿಸಿ ದಾಸ್ತಾನು ಮಾಡಿಟ್ಟುಕೊಂಡಿವೆ. ಇದೇ ವಾಹನೋದ್ಯಮ ಕುಸಿತಕ್ಕೆ ಕಾರಣ ಎಂದು ಬಜಾಜ್ ಆಟೋ ಮುಖ್ಯಸ್ಥ ರಾಜೀವ್ ಬಜಾಜ್ ಹೇಳಿಕೆ ಕೊಟ್ಟಿದ್ದಾರೆ. ಆರ್ಥಿಕ ಕುಸಿತ ಉದ್ಯಮವನ್ನು ನಷ್ಟಕ್ಕೆ ತಳ್ಳಿದೆ. ಕೊನೆಗೆ ಜಿಎಸ್‍ಟಿಯಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹಾನಿಯಾಗಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್‍ವಾಲ್ ದೇಶದ ಆಟೋಮೊಬೈಲ್ ಉದ್ದಿಮೆಯಲ್ಲಿ ಆರ್ಥಿಕ ಹಿಂಜರಿತವೇ ಇಲ್ಲ. ಕೇಂದ್ರ ಸರ್ಕಾರದಿಂದ ಪ್ಯಾಕೇಜ್ ಪಡೆಯುವ ಸಲುವಾಗಿ ಕೆಲವು ಉದ್ದಿಮೆಗಳು ಗದ್ದಲ ಎಬ್ಬಿಸುತ್ತಿವೆ. ಹೊಸತಾಗಿ ಬಿಡುಗಡೆಯಾಗುವ ವಾಹನಗಳು ಭಾರಿ ಪ್ರಮಾಣದಲ್ಲಿ ಬುಕಿಂಗ್ ಆಗುತ್ತಿವೆ. ಹೀಗಾಗಿ ಹಿಂಜರಿತ ಇಲ್ಲ ಎಂದಿದ್ದಾರೆ.
ಕರ್ನಾಟಕದ ಮಟ್ಟಿಗೆ ಆರ್ಥಿಕ ಹಿಂಜರಿತ ಅಷ್ಟು ಪರಿಣಾಮ ಬೀರಿಲ್ಲ. ಆರ್ಥಿಕ ಹಿಂಜರಿತದ ಕುರಿತು ಮಾಧ್ಯಮಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ, ನಿಜಕ್ಕೂ ಸಮಸ್ಯೆಯಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವರದಿ ಕೇಳಿದ್ದೇನೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಇದೆಲ್ಲವನ್ನೂ ಕೇಳಿ ನನಗೆ ಆಘಾತವಾಯಿತು. ಆರ್ಥಿಕ ಕುಸಿತ ನಮ್ಮನ್ನು ಮಾತ್ರವಲ್ಲ, ವಿಶ್ವವನ್ನೇ ಕಾಡುತ್ತಿದೆ. ಅದರಲ್ಲೂ ನಮ್ಮನ್ನು ಹೆಚ್ಚು ಅಪಾಯಕ್ಕೆ ತಳ್ಳುವುದರಲ್ಲಿದೆ. ಹೀಗಾಗಿ ಆರ್ಥಿಕ ಕುಸಿತದ ಪರಿಣಾಮಗಳನ್ನು ಮತ್ತು ಕೈಗೊಳ್ಳಬೇಕಾದ ಪರಿಹಾರೋಪಾಯಗಳನ್ನು ಸರ್ಕಾರ, ಉದ್ಯಮ ಕಂಡುಕೊಳ್ಳಬೇಕಿದೆ. ಇದರ ಸುತ್ತ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖನ ಹೊಂದಿದೆ.
ದೇಶದ ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನಾ ಕ್ಷೇತ್ರದಲ್ಲಿ ಶಿವಮೊಗ್ಗಕ್ಕೆ ದೊಡ್ಡ ಹೆಸರಿದೆ. ಇಲ್ಲಿ 3 ಕೈಗಾರಿಕಾ ವಸಾಹತು ಪ್ರದೇಶಗಳಿವೆ. ಇದರಲ್ಲಿ ಮಾಚೇಹಳ್ಳಿ ಮತ್ತು ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸುಮಾರು 35 ಆಟೋಮೊಬೈಲ್ ಬಿಡಿಭಾಗ ತಯಾರಿಕಾ ಘಟಕಗಳಿವೆ. 250ಕ್ಕೂ ಹೆಚ್ಚು ಆ್ಯನ್ಸಿಲರಿ ಯೂನಿಟ್‍ಗಳು ಕಾರ್ಯನಿರ್ವಹಿಸುತ್ತಿವೆ. 5 ಸಾವಿರಕ್ಕೂ ಅಧಿಕ ಕಾರ್ಮಿಕರು ಈ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರಿಂದು ಯುರೋಪ್, ಮಧ್ಯಪ್ರಾಚ್ಯ, ಅಮೆರಿಕಾ ದೇಶಗಳಿಂದ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಹಲವು ಕೈಗಾರಿಕೆಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಇನ್ನು ಕೆಲವು ವಾರಕ್ಕೆ 3 ದಿನ ಮಾತ್ರ ಕೆಲಸ ನೀಡಿ, ಉಳಿದಂತೆ `ಲೇ ಆಫ್’ ಘೋಷಿಸಿವೆ. ಒಂದು ಕಾರ್ಖಾನೆ ಆಗಸ್ಟ್ 1ರಿಂದ 8ರ ವರೆಗೆ ಮುಚ್ಚಿದ್ದರೆ, ಇನ್ನೊಂದು ಕಾರ್ಖಾನೆ 20 ದಿನಗಳ `ಲೇ ಆಫ್’ ಘೋಷಣೆ ಮಾಡಿತ್ತು.
ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ, ವಿಜಯಪುರ, ಅಥಣಿ ಮಾತ್ರವಲ್ಲದೆ ಹೊರ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೂ ಬೆಂಗಳೂರಿನ ಚಿಕ್ಕಪೇಟೆಯಿಂದ ಜವಳಿ ಉತ್ಪನ್ನ ಪೂರೈಕೆಯಾಗುತ್ತಿತ್ತು. ನೋಟು ರದ್ಧತಿ, ಜಿಎಸ್‍ಟಿ ಅಡ್ಡ ಪರಿಣಾಮದಿಂದ ಇದೇ ವರ್ಷದ ಏಪ್ರಿಲ್‍ನಿಂದ ಇಲ್ಲಿಯ ವರೆಗೆ ಜವಳಿ ವ್ಯಾಪಾರದಲ್ಲಿ ಶೇಕಡ 20ರಷ್ಟು ಇಳಿಕೆಯಾಗಿದೆ.
ದಕ್ಷಿಣ ಏಷ್ಯಾದಲ್ಲೇ ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶ ಅತಿ ದೊಡ್ಡದು. ಇಲ್ಲಿರುವ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಅಕ್ಷರಶಃ ತೀವ್ರನಿಗಾ ಘಟಕದಲ್ಲಿವೆ. ಇದನ್ನು 12 ಲಕ್ಷ ಕಾರ್ಮಿಕರು ನಂಬಿಕೊಂಡು ಬದುಕುತ್ತಿದ್ದಾರೆ. ಇದರಲ್ಲಿ 4 ಲಕ್ಷ ಮಂದಿ ಮಹಿಳೆಯರಿದ್ದಾರೆ. ದಿನಕ್ಕೆ 15 ಲಕ್ಷ ವಹಿವಾಟು ನಡೆಯುತ್ತಿದ್ದ ಜಾಗದಲ್ಲಿ 3 ಲಕ್ಷ ವಹಿವಾಟು ನಡೆಯುತ್ತಿದೆ. ಬಿಎಫ್‍ಡಬ್ಲ್ಯೂ. ಎಎಂಎಸ್, ಎಸಿಇ ಡಿಸೈನರ್ಸ್‍ನಂತಹ ದೊಡ್ಡ ಕಂಪನಿಗಳು ತಿಂಗಳಿಗೆ 250 ಯಂತ್ರಗಳನ್ನು ತಯಾರಿಸಿ ಮಾರುತ್ತಿದ್ದವು. ಈಗ ಸಾವಿರಕ್ಕೂ ಅಧಿಕ ಯಂತ್ರಗಳು ಧೂಳು ಹಿಡಿಯುತ್ತಿವೆ. ಕೆಲ ಕಾರ್ಖಾನೆಗಳಲ್ಲಿ ಶೇಕಡ 60ರಷ್ಟು ಮಾರಾಟ ಕುಸಿದಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇಕಡ 90ರಷ್ಟು ಮಾರಾಟ ತಗ್ಗಿದೆ. ದೊಡ್ಡ ಉದ್ಯಮಿ ಆಗುವ ಕನಸು ಕಂಡ ಸಣ್ಣ ಕಾರ್ಖಾನೆಗಳ ಮಾಲೀಕರು ಕಾರ್ಮಿಕರಿಗೆ ಸಂಬಳ ಕೊಡದ ಸ್ಥಿತಿಗೆ ಬಂದಿದ್ದಾರೆ. ಸ್ವಂತ ಕಾರ್ಖಾನೆ ಮುಚ್ಚಿ, ತಾವೂ ಕೆಲಸಕ್ಕೆ ಸೇರುತ್ತಿದ್ದಾರೆ.
`ಮತ್ಸ್ಯೋದ್ಯಮ’ವೂ ಇದಕ್ಕೆ ಹೊರತಾಗಿಲ್ಲ. ಮಂಗಳೂರಿನ ಬೋಟ್‍ಗಳಲ್ಲಿ 20 ಟನ್‍ನಷ್ಟು ಮೀನು ತರಲಾಗುತ್ತದೆ. ಇದರ ಮಾರುಕಟ್ಟೆ ಬೆಲೆ ರೂ. 10 ಲಕ್ಷದಷ್ಟಾಗುತ್ತದೆ. ಇತ್ತೀಚೆಗೆ ಮೀನು ಖರೀದಿಸುವವರಿಲ್ಲದೆ ಮೀನುಗಳನ್ನು ನೀರಿಗೆ ಬಿಸಾಡುವ ಸ್ಥಿತಿ ಎದುರಾಗುತ್ತಿದೆ. ಮೀನಿನ ಅತಿದೊಡ್ಡ ಖರೀದಿದಾರರಾಗಿರುವ `ಫಿಶ್ ಮಿಲ್’ ಮತ್ತು `ಫಿಶ್ ಆಯಿಲ್’ ಕಂಪನಿಗಳು ಜಿಎಸ್‍ಟಿ ಹೊಡೆತಕ್ಕೆ ನಲುಗಿ, ಮುಷ್ಕರಕ್ಕೆ ಮುಂದಾಗಿವೆ.
ಹಾಗೆಯೇ ಮಂಡ್ಯದ ಸಿದ್ಧ ಉಡುಪು ತಾಯಾರಿಕಾ ಘಟಕ ದೇಶೀಯ ಮಾರುಕಟ್ಟೆಯನ್ನೇ ನಂಬಿಕೊಂಡು ಸಾಗುತ್ತಿದೆ. ಇಲ್ಲಿ 10 ಘಟಕಗಳಿದ್ದು, ಪ್ರತಿ ಘಟಕದಲ್ಲಿ 50ರಿಂದ 150 ಜನ ಕೆಲಸ ಮಾಡುತ್ತಿದ್ದಾರೆ. ಸಗಟು ವರ್ತಕರು ಸಾಲ ಕೇಳುತ್ತಿರುವ ಕಾರಣ, ನಷ್ಟ ಉಂಟಾಗಿ ಘಟಕಗಳು ಮುಚ್ಚುವ ಭೀತಿಯಲ್ಲಿದೆ.
ವರ್ಷಕ್ಕೊಮ್ಮೆಯಾದರೂ ಏರಿಕೆಯಾಗುತ್ತಿರುವ ಡೀಸೆಲ್ ದರ, ಬೆಂಗಳೂರಿನಿಂದ ಮುಂಬೈಗೆ ಹೋಗಿಬರಲು ಪಾವತಿಸಬೇಕಾದ 28 ಸಾವಿರ ಟೋಲ್ ಶುಲ್ಕ, ದೆಹಲಿಗೆ ಹೋಗಿ ಬರಲು ಪಾವತಿಸಬೇಕಾದ 60 ಸಾವಿರ ಟೋಲ್ ಶುಲ್ಕ ಲಾರಿ ಮಾಲೀಕರ ಕತ್ತನ್ನು ಹಿಸುಕುತ್ತಿವೆ. ಲಾರಿಗಳನ್ನು ಖರೀದಿಸಲು ಮಾಡಿದ್ದ ಸಾಲವನ್ನು ಕಳೆದ ಮೂರು ತಿಂಗಳಿನಿಂದ ಪಾವತಿ ಮಾಡಿಲ್ಲ. ಹೀಗಾಗಿ ನಮ್ಮ ರಾಜ್ಯದ ಲಾರಿ ಮಾಲೀಕರು ಈ ಸಾಲಿನ `ದಸರಾ ಹಬ್ಬ’ ಅಂದರೆ `ಆಯುಧ ಪೂಜೆ’ಯನ್ನೇ ಮಾಡಿಲ್ಲ.
ರಾಜ್ಯದ ಬಿಎಸ್‍ಎನ್‍ಎಲ್ ಸಂಸ್ಥೆ ಬಳಸಿರುವ ವಿದ್ಯುತ್‍ಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲದೆ 2 ತಿಂಗಳ ಕಾಲ ವಿದ್ಯುತ್ ನಿಲುಗಡೆ ಮಾಡಬೇಡಿ. ಪೊಲೀಸ್ ಇಲಾಖೆ, ರಕ್ಷಣಾ ಇಲಾಖೆ, ಗುಪ್ತಚರ ಇಲಾಖೆ, ಬ್ಯಾಂಕಿಂಗ್ ವಲಯಕ್ಕೆ ತೊದರೆಯಾಗುತ್ತದೆ ಎಂದು ಇಂಧನ ಇಲಾಖೆಯ ಮುಂದೆ ಮಂಡಿಯೂರಿ ಬೇಡಿಕೊಂಡಿದೆ. ಇದಿಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಪ್ರಮಾಣದ ಉದ್ಯೋಗದ ಮಟ್ಟ ಮತ್ತು ನಗದು ಕೊರತೆಯಿಂದಾಗಿ ಖರೀದಿ ಸಾಮಥ್ರ್ಯದಲ್ಲಿ ಇಳಿಕೆಯಾಗಿದೆ. ಇದು ಆರ್ಥಿಕ ಹಿಂಜರಿತದ ಫಲ. ಇದರಿಂದ ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಕುಸಿತ ಕಾಣುತ್ತಿವೆ.
ಇನ್ನೂ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಭಾರತೀಯ ರೈಲ್ವೆ ಇಲಾಖೆ, ಖಾಸಗಿಯವರಿಗೆ ತನ್ನ ಭೂಮಿಯನ್ನು 45 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಿ ಆದಾಯ ವೃದ್ಧಿಸಿಕೊಳ್ಳಲು ಮುಂದಾಗಿದೆ. ಹೀಗೆ ಭೂಮಿ ನೀಡಿ 50 ಸಾವಿರ ಕೋಟಿ ಸಂಗ್ರಹಿಸಿಕೊಳ್ಳುವ ಯೋಜನೆಯನ್ನು ಇಲಾಖೆ ಹೊಂದಿದೆ.
ಇನ್ನೂ ಆರ್ಥಿಕ ಕುಸಿತ ನಮ್ಮ ರಾಜ್ಯ, ನಮ್ಮ ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಆಗಿದೆ ಎಂಬುದಕ್ಕೆ ಅರ್ಜೆಂಟಿನಾದಲ್ಲಿ `ಕಾಂಡೋಮ್’ ಬೇಡಿಕೆ ಕುಸಿತ ಮತ್ತು ಬ್ರಿಟನ್‍ನ ಪ್ರಸಿದ್ಧ `ಥಾಮಸ್‍ಕುಕ್’ ದಿವಾಳಿಯಾಗಿರುವುದು ಸಾಕ್ಷಿಯಾಗಿದೆ. ದಕ್ಷಿಣ ಅಮೆರಿಕಾದ ಅರ್ಜೆಂಟಿನಾ ರಸಿಕರ ಪಾಲಿಗೆ ನೆಚ್ಚಿನ ತಾಣ. ಅಲ್ಲೀಗ, `ಕಾಂಡೋಮ್’ಗಳ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದೆ. ಕಾಂಡೋಮ್‍ಗಳ ಮತ್ತು ಗರ್ಭನಿರೋಧಕ ಮಾತ್ರೆಯ ದರ ಶೇಕಡ 36ರಷ್ಟು ಏರಿಕೆಯಾಗಿದೆ. ಹೀಗಾಗಿ 1 ಲಕ್ಷ 44 ಸಾವಿರ ಮಹಿಳೆಯರು ಗರ್ಭನಿರೋಧಕ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿಬಿಟ್ಟಿದ್ದಾರೆ. 178 ವರ್ಷಗಳ ಇತಿಹಾಸವಿರುವ ಥಾಮಸ್‍ಕುಕ್ ಕಂಪನಿ 1841ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ವ್ಯವಹಾರ ಸ್ಥಗಿತಗೊಳಿಸಿದೆ. ಅದರ ನಾಲ್ಕು ವಿಮಾನಯಾನ ಸಂಸ್ಥೆಗಳು ಪತನಗೊಂಡಿವೆ. ಇದರಿಂದ ಬ್ರಿಟನ್‍ನ 9 ಸಾವಿರ ಮಂದಿ ಸೇರಿದಂತೆ 16 ದೇಶಗಳಲ್ಲಿರುವ ಕಂಪನಿಯ 22 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಿಂದ ಕಾಪಾಡಬೇಕಾದ ವಿಶ್ವ ಸಂಸ್ಥೆ 230 ಮಿಲಿಯನ್ ಡಾಲರ್ ಕೊರತೆಯಿಂದ ನರಳುತ್ತಿದೆ. ಇದೇ ಮಾಸದಲ್ಲಿ ಇದರ ಖಜಾನೆ ಬರಿದಾಗಬಹುದೆಂದು ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗ್ಯುಟೆರ್ರಸ್ ಆತಂಕ ವ್ಯಕ್ತಪಡಿಸಿ 37 ಸಾವಿರ ಸಿಬ್ಬಂದಿಗೆ ಪತ್ರ ಬರೆದಿದ್ದಾರೆ.
ಇವೆಲ್ಲಕ್ಕಿಂತಲೂ ನನಗೆ ಭೀತಿ ಮೂಡಿಸಿದ್ದು 2018-19ನೇ ಸಾಲಿನಲ್ಲಿ ದೇಶದ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‍ಗಳಿಗೆ ಸುಮಾರು 72 ಸಾವಿರ ಕೋಟಿ ವಂಚನೆಯಾಗಿದೆ. 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕುಗಳು ಸುಮಾರು 32 ಸಾವಿರ ಕೋಟಿ ವಂಚನೆಗೆ ತುತ್ತಾಗಿವೆ. ಇದಕ್ಕಾಗಿ 2480 ವಂಚನೆ ಪ್ರಕರಣಗಳು 18 ಸರ್ಕಾರಿ ಬ್ಯಾಂಕುಗಳಲ್ಲಿ ವರದಿಯಾಗಿದೆ. ಆದರೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮನಮೋಹನ್ ಸಿಂಗ್ ಪ್ರಧಾನಿ, ರಘುರಾಮ್ ರಾಜನ್ ಆರ್‍ಬಿಐ ಗವರ್ನರ್ ಆಗಿದ್ದಾಗ ರಾಜಕೀಯ ನಾಯಕರ ಫೋನ್ ಕರೆಗಳ ಆಧಾರದಲ್ಲಿಯೇ ಬ್ಯಾಂಕುಗಳ ಸಾಲ ನೀಡುತ್ತಿದ್ದವು, ಇದೇ ಅತ್ಯಂತ ಕೆಟ್ಟ ಕಾಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂತೂ-ಇಂತೂ `ಜಾತಿ’, `ಧರ್ಮ’, `ದೇಶಭಕ್ತಿ’ಯನ್ನು `ಹಿಂದಿಕ್ಕಿ ದೇಶದ ಆರ್ಥಿಕತೆ’ಯ ಬಗ್ಗೆ ಚರ್ಚೆಯಾಗುತ್ತಿದೆ. ದೇಶದ `ಆರ್ಥಿಕ ಕುಸಿತ’ಕ್ಕೆ ಹತ್ತು-ಹಲವು ದೇಶೀಯ ಕಾರಣಗಳು ಇವೆ. ಹಾಗೆಯೇ ಜಾಗತಿಕ ಮಟ್ಟದ ಕಾರಣಗಳು ಇವೆ. ಇವುಗಳಲ್ಲಿ ಜಾಗತಿಕ ಕುಸಿತವೂ ಒಂದಾಗಿದೆ. ಹಾಗಂತ ಇದೊಂದು ಪ್ರಮುಖ ಕಾರಣವಾಗಿ ಆರ್ಥಿಕ ಕ್ಷೇತ್ರವನ್ನು ಕಾರ್ಗತ್ತಲಿನತ್ತ ದೂಡಿಲ್ಲ. ಅಕ್ಟೋಬರ್ ನಂತರದ ದಿನಗಳಲ್ಲಿ ಆರ್ಥಿಕ ಕ್ಷೇತ್ರ ಚೇತರಿಸಿಕೊಳ್ಳುತ್ತದೆ ಎಂಬ ಸುಳಿವನ್ನು ಹಣಕಾಸು ಸಚಿವರು ಸಂತಸದಿಂದ ನೀಡಿದ್ದಾರೆ. ಕಾರಣ, ಹಲವು ಉದಾರ ಸುಧಾರಣೆಯನ್ನು ನೀಡಿದ್ದೇವೆಂಬ ಭಾವನೆ ಅವರಲ್ಲಿದ್ದಂತಿದೆ. ಭಾಜಪ ಸ್ಥಳೀಯ ನಾಯಕ ನಂದಕುಮಾರ್ ಪ್ರಕಾರ ಈ ಆರ್ಥಿಕ ವರ್ಷದ ಆರಂಭದಲ್ಲೇ ಚುನಾವಣೆ ಬಂದಿತ್ತು. ಹೀಗಾಗಿ ಹೂಡಿಕೆಯ ಸಮಸ್ಯೆಯಾಗಿದೆ. ಬಗೆಹರಿಸಲು ನೀತಿಸಂಹಿತೆ ಸೇರಿದಂತೆ ಹಲವು ಕಾರಣಗಳಿದ್ದವೆಂದು ಧ್ವನಿಗೂಡಿಸಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ವಾಣಿಜ್ಯ ಬ್ಯಾಂಕುಗಳು ನೀಡಿದ್ದ “ನಾನ್ ಪರ್‍ಫಾರ್ಮಿಂಗ್ ಅಸೆಟ್ಸ್” ಅಂದರೆ “ಹಿಂಪಡೆಯಲಾಗದ ನೀಡಿಕೆ”ಯೂ ಆರ್ಥಿಕ ದುಃಸ್ಥಿತಿಗೆ ಕಾರಣ ಎಂದು ಜೆಡಿಎಸ್‍ನ ಸ್ಥಳೀಯ ನಾಯಕ ನಾರಾಯಣಸ್ವಾಮಿ ಅವರ ವಾದವಾಗಿದೆ.
ಇತ್ತೀಚಿನ ಕೆಲವು ತಿಂಗಳಿನಿಂದ ಬ್ಯಾಂಕಿನ ಬ್ಯಾಲೆನ್ಸ್ ಶೀಟ್‍ನಲ್ಲಿ ಚೇತರಿಕೆ ಕಾಣಲಾಗಿದೆ. ಹೀಗಾಗಿ ಸಾಲ ಪಡೆಯಲು ಸಕಾರಾತ್ಮಕ ಪರಿಣಾಮ ಉಂಟಾಗಿದೆ ಎಂದು ಆರ್‍ಎಸ್‍ಎಸ್ ಕಟ್ಟಾಳು ಜಯಚಂದ್ರ ಹೇಳುತ್ತಾರೆ. ಆದರೆ, `ಆಟೋಮೊಬೈಲ್’ ಮತ್ತು `ಕನ್‍ಸ್ಯೂಮರ್ ಡ್ಯುರೇಬಲ್ ಸೆಕ್ಟರ್’ ಸಮಸ್ಯೆ ಚಿಂತೆಗೀಡು ಮಾಡುತ್ತದೆ. ಅಂದರೆ, “ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನೀಸ್”ನ ಲಿಕ್ವಿಡಿಟಿಯೇ ಪ್ರಮುಖವಾಗಿದೆ. ಹೀಗಾಗಿಯೇ ಆರ್ಥಿಕ ಮಂತ್ರಿಗಳು ಕೆಲವು ವಲಯಗಳನ್ನು ಗುರ್ತಿಸಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜೊತೆಗೆ `ಬಾಹ್ಯವಾಗಿ’ ಮತ್ತು `ವಾಣಿಜ್ಯವಾಗಿ’ ಸಾಲ ಪಡೆಯಲು ಇದ್ದ ನಿಯಮಗಳನ್ನು `ಕಾರ್ಪೊರೇಟ್’ ಮತ್ತು `ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ’ಗಳಿಗಾಗಿ ಸಡಿಲಿಸಿದ್ದಾರೆ. ಇದರಿಂದ “ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ”ಗಳು ಸದೃಢಗೊಳ್ಳುತ್ತವೆಂಬ ಆಶಾಭಾವನೆಯನ್ನು ಸರ್ಕಾರ ಹೊಂದಿದೆ. ಅಲ್ಲದೆ, ನೀಡುವ ಸಾಲಕ್ಕೆ ಬ್ಯಾಂಕುಗಳಿಗೆ ಮಧ್ಯಸ್ಥಗಾರನಾಗಿಯೂ ಕಾರ್ಯನಿರ್ವಹಿಸಲಿದೆ. ಜಿಎಸ್‍ಟಿ ಕೂಡ ಮೂರು ದರಗಳನ್ನು ಒಳಗೊಳ್ಳಲಿದೆ ಎಂದು ಅರ್ಥ ಮಂತ್ರಿಗಳು ಹೇಳಿದ್ದಾರೆ. ಇದರ ನಡುವೆ ನೇರ ತೆರಿಗೆ ಶಿಫಾರಸ್ಸನ್ನು ಕೂಡಲೇ ಗಣನೆಗೆ ತೆಗೆದುಕೊಳ್ಳಬೇಕಿದೆ.










