ಇಂದು ಇಡಿ ಮುಂದೆ ಹಾಜರಾಗಲಿರುವ ಸೋನಿಯಾ ಗಾಂಧಿ.

70
firstsuddi

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿಚಾರಣೆಗೆ ಇಡಿ ಸಮನ್ಸ್ ನೀಡಿತ್ತು. ರಾಹುಲ್ ಗಾಂಧಿ 5 ದಿನಗಳ ವಿಚಾರಣೆ ಎದುರಿಸಿದ್ದರು. ಆದರೆ ಕೋವಿಡ್ ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿನ್ನೆಲೆ ವಿಚಾರಣೆ ಮುಂದೂಡಲು ಸೋನಿಯಾಗಾಂಧಿ ಮನವಿ ಮಾಡಿದ್ದರು. ಇದಕ್ಕೆ ಸಹಕರಿಸಿದ್ದ ಅಧಿಕಾರಿಗಳು ಇಂದಿಗೆ ದಿನಾಂಕ ನಿಗದಿ ಮಾಡಿದ್ದರು.

ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ದೆಹಲಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಹುಲ್ ವಿಚಾರಣೆ ವೇಳೆ ನಡೆಸಿದ ಪ್ರತಿಭಟನೆ ಮಾದರಿಯಲ್ಲಿ ಇವತ್ತೂ ಬೀದಿಗಿಳಿಯಲು ಪಕ್ಷ ತೀರ್ಮಾನಿಸಿದೆ.

ಏನಿದು ಪ್ರಕರಣ?

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿತ್ತು. ಇದು 1937ರಲ್ಲಿ 5,000 ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಅದರ ಷೇರುದಾರರಾಗಿ ಸ್ಥಾಪಿಸಿತು. 2010ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 1,057 ಷೇರುದಾರರನ್ನು ಹೊಂದಿತ್ತು. ಇದು ತೀವ್ರ ನಷ್ಟವನ್ನು ಅನುಭವಿಸಿತು. ಹೀಗಾಗಿ, ಅದರ ಹಿಡುವಳಿಗಳನ್ನು 2011ರಲ್ಲಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL)ಗೆ ವರ್ಗಾಯಿಸಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅದರ ನಿರ್ದೇಶಕರ ಮಂಡಳಿಯಲ್ಲಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಾಗ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಗಾಂಧಿ ಕುಟುಂಬದವರು ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ಈ ಪ್ರಕರಣದ ಎಲ್ಲಾ ಐವರು ಆರೋಪಿಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್ ಮತ್ತು ಸುಮನ್ ದುಬೆ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಲಾಯಿತು. ಆದರೆ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಿಲ್ಲ.