ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ…

46
firstsuddi

ಬೆಂಗಳೂರು : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಿತು.

ಕಳೆದ ವರ್ಷದ ಸ್ವಾತಂತ್ರ್ಯ ದಿನದಂದು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ರಾರಾಜಿಸಿತ್ತು, ಇದೀಗ ಪ್ರಪ್ರಥಮ ಬಾರಿಗೆ ಇಲ್ಲಿ ಗಣರಾಜ್ಯೋತ್ಸವ ಆಚರಿಸಲಾಗಿದೆ.

ಖುದ್ದು ಕಂದಾಯ ಇಲಾಖೆ ಇಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದು, ಬೆಂಗಳೂರು ಉತ್ತರ ಉಪವಿಭಾಗ ಅಧಿಕಾರಿ ಡಾ.ಎಂಜೆ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಉಪಸ್ಥಿತರಿದ್ದರು.

100ಕ್ಕೂ ಅಧಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂತ ತೆರೆಸ ಬಾಲಕಿಯರ ಶಾಲೆ, ಚಾಮರಾಜಪೇಟೆ ಬಾಲಕಿಯರ ಶಾಲೆ, ಸರ್ಕಾರಿ ಕನ್ನಡ, ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ 5 ಶಾಲೆಗಳಿಂದ ಮಕ್ಕಳು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಚಾಮರಾಜಪೇಟೆ ನಾಗರಿಕರು ಭಾರತ ಮಾತೆಗೆ ಜೈಕಾರ ಹಾಕಿ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರೂ ಸಜ್ಜಾಗಿದ್ದರು. ಸಿಸಿಟಿವಿ ಅಳವಡಿಸಿ ಮಾನಿಟರಿಂಗ್ ಮಾಡುವುದಕ್ಕೆ ಕೊಠಡಿ ಸಜ್ಜು ಮಾಡಲಾಗಿತ್ತು. ಒಟ್ಟಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.