ಇಮ್ರಾನ್ ಖಾನ್ ಬಂಧನ ಖಂಡಿಸಿ ಪ್ರತಿಭಟನೆ – ಉದ್ವಿಗ್ನ ವಾತಾವರಣ…

47
firstsuddi

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಬಂಧನ ಖಂಡಿಸಿ ಪಾಕಿಸ್ತಾನದಾದ್ಯಂತ ಬೆಂಬಲಿಗರಿಂದ ಪ್ರತಿಭಟನೆ ಭುಗಿಲೆದ್ದಿದೆ.

ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆಗಾಗಿ ಲಾಹೋರ್‌ನಿಂದ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅರೆಸೈನಿಕ ರೇಂಜರ್ ಗಳು (ಫೆಡರಲ್ ಸರ್ಕಾರ) ನಿನ್ನೆ ಬಂಧಿಸಿದ್ದಾರೆ. ಇಮ್ರಾನ್ ಖಾನ್ ಬಂಧನ ವಿರೋಧಿಸಿ ಅವರ ಬೆಂಬಲಿಗರು ಲಾಹೋರ್ ನಲ್ಲಿರುವ ಸೇನಾ ಕಮಾಂಡರ್ ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ.

ಇಸ್ಲಾಮಾಬಾದ್ ಮಾತ್ರವಲ್ಲದೇ ರಾವಲ್ಪಿಂಡಿ, ಲಾಹೋರ್, ಕರಾಚಿ, ಗುಜ್ರಾನ್ವಾಲಾ, ಫೈಸಲಾಬಾದ್, ಮುಲ್ತಾನ್, ಪೇಶಾವರ್ ಮತ್ತು ಮರ್ದಾನ್ ನಲ್ಲಿಯೂ ಪ್ರತಿಭಟನೆಗಳು ಪ್ರಾರಂಭವಾಗಿರುವುದಾಗಿ ವರದಿಗಳು ತಿಳಿಸಿವೆ.

ರಾವಲ್ಪಿಂಡಿಯಲ್ಲಿ ಸೇನಾ ಪ್ರಧಾನ ಕಚೇರಿಯ ಮುಖ್ಯ ಗೇಟ್ ಅನ್ನು ಪ್ರತಿಭಟನಾಕಾರರು ಒಡೆದು ಹಾಕಿದ್ದಾರೆ. ಹಲವಾರು ನಗರಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಕರಾಚಿಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.

ಇಮ್ರಾನ್ ಖಾನ್ ಬಂಧನ ವಿರೋಧಿಸಿ ವಾಷಿಂಗ್ಟನ್ ಡಿಸಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ನಿವಾಸದ ಹೊರಗೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣ ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.