ಉತ್ತರಕನ್ನಡದಲ್ಲಿ ಡೆಂಗ್ಯೂಗೆ ಮತ್ತೊಂದು ಬಲಿ- ಸಾವಿನ ಸಂಖ್ಯೆ 2ಕ್ಕೆ ಏರಿಕೆ…

55
firstsuddi

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಮೀರಾನ್ ಸಾದಾ(77) ಎಂಬುವವರು ಡೆಂಗ್ಯೂ ಜ್ವರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮೀರಾನ್ ಸಾದಾ ಅವರು ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ಮೀರಾನ್ ನಿಧನದ ಮೂಲಕ ಜಿಲ್ಲೆಯಲ್ಲಿ ಈವರೆಗೆ ಡೆಂಗ್ಯೂದಿಂದ ಇಬ್ಬರ ಸಾವಾಗಿದೆ.

ನಿನ್ನೆ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24) ಬಲಿಯಾಗಿದ್ದರು. ಇವರು ಸಾಗರಶ್ರೀ ಬೋಟ್‌ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಇನ್ನೂ ಇಬ್ಬರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಅವರು ಸಹ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಭಟ್ಕಳ ಬಂದರಿನಲ್ಲಿ ಶುಚಿತ್ವ ಇಲ್ಲದ ಕಾರಣ ಹೆಚ್ಚು ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಈ ಭಾಗದಲ್ಲಿ ಹಲವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.