ವಿಜಯಪುರ : ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಎಥಿನಾಲ್ ಟ್ಯಾಂಕರ್ ಸ್ಪೋಟಗೊಂಡು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ನಾಡಗೌಡ ರೋಡಲೈನ್ಸ್ ಎಂಬ ಗ್ಯಾರೇಜ್ ನಲ್ಲಿ ನಡೆದಿದೆ. ಎಥಿನಾಲ್ ತುಂಬಿದ ಟ್ಯಾಂಕರ್ ನ್ನು ಖಾಲಿ ಮಾಡಿ ಟ್ಯಾಂಕರ್‍ನ ಕೆಲವು ಭಾಗಕ್ಕೆ ವೆಲ್ಡಿಂಗ್ ಮಾಡಲು ಗ್ಯಾರೆಜ್‍ಗೆ ತರಲಾಗಿದ್ದು, ಈ ವೇಳೆ ಟ್ಯಾಂಕರ್ ಸ್ಪೋಟಗೊಂಡು ಕಾರ್ಮಿಕರಾದ ರಾಜು ಹಾಗೂ ಪ್ರಕಾಶ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ವಿಶ್ವನಾಥ್ ಬಡೀಗೇರ, ಪ್ರಕಾಶ್ ಶಿರೋಳ, ಬಸವರಾಜ್ ಡೊಣೂರ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ವಿಜಯನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಜಯಪುರ ಎಸ್ಪಿ ಪ್ರಕಾಶ್ ನಿಕ್ಕಮ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.










