ಎದೆಗೆ ಒದ್ದು ಪ್ರಯಾಣಿಕನನ್ನು ಬಸ್ಸಿನಿಂದ ಹೊರಹಾಕಿದ ಕಂಡಕ್ಟರ್ – ಸೇವೆಯಿಂದ ಅಮಾನತು…

66
firstsuddi

ದಕ್ಷಿಣಕನ್ನಡ : ಕೆಎಸ್​​​​ಆರ್​​ಟಿಸಿ ಬಸ್ ನಿರ್ವಾಹಕರೊಬ್ಬರು ಪ್ರಯಾಣಿಕನ ಎದೆಗೆ ಒದ್ದು ಬಸ್ಸಿನಿಂದ ಹೊರಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿನ್ನೆ ನಡೆದಿದೆ.

ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ನಿರ್ವಾಹಕನನ್ನು ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಈ ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದಾನೆ. ಬಸ್ಸಿನಿಂದ ಕೆಳಗಿಳಿಯುವಂತೆ ಸೂಚಿಸಿದ ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಕೊನೆಗೆ, ಕಾಲಿನಿಂದ ಪ್ರಯಾಣಿಕನ ಎದೆಗೆ ಒದ್ದು, ರಸ್ತೆಗೆ ತಳ್ಳಿದ್ದಾನೆ. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿದೆ. ಇದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಬಸ್ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಜೊತೆಗೆ, ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದರು.

ಕಂಡೆಕ್ಟರ್ ನನ್ನು ಈಗಾಗಲೇ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ನಿಗಮದ ಚಾಲನಾ ಸಿಬ್ಬಂದಿಗಳಿಗೆ ಸಾರ್ವಜನಿಕ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ನಿರಂತರ ತರಬೇತಿ ಹಾಗೂ ತಿಳುವಳಿಕೆ ನೀಡಿದರೂ ಸಹ ಈ ರೀತಿಯ ಘಟನೆ ನಡೆದಿರುವುದು ದುಃಖದ ಸಂಗತಿ ಎಂದು ಪುತ್ತೂರು ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.