ಕರ್ನಾಟಕ ವಿಧಾನಸಭೆ ಚುನಾವಣೆ : 80 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ…

56
firstsuddi

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ಪರಿಶೀಲನೆಯ ಕುರಿತು ಚುನಾವಣಾ ಆಯೋಗವು ಮಹತ್ವದ ಸುದ್ದಿಗೋಷ್ಠಿ ನಡೆಸಿತು. ರಾಜೀವ್ ಕುಮಾರ್ ಮಾತನಾಡಿ, ಇದೇ ಮೊದಲ ಬಾರಿಗೆ, ರಾಜ್ಯದಲ್ಲಿ ಎಲ್ಲಾ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನರು ಬಯಸಿದಲ್ಲಿ, ಅವರ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿದ್ದೇವೆ. ಅಧಿಸೂಚನೆ ಹೊರಡಿಸಿದ 5 ದಿನಗಳೊಳಗೆ ಫಾರ್ಮ್ 12 ಡಿ ಲಭ್ಯವಿರುತ್ತದೆ. ಇದರಿಂದ 80 ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು.

ಮೇ 24ಕ್ಕೆ ಹಾಲಿ ಸರ್ಕಾರದ ಅವಧಿ ಅಂತ್ಯವಾಗಲಿದ್ದು, ಅದಕ್ಕೂ ಮುಂಚಿತವಾಗಿ ಚುನಾವಣೆ ಮುಗಿಸಬೇಕಾಗಿದೆ. ರಾಜ್ಯದಲ್ಲಿ ಒಟ್ಟು 5,21,73,579 ಜನ ಮತದಾರರಿದ್ದಾರೆ. 2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟವರು 12,15,763 ಜನ ಇದ್ದಾರೆ. 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. 9,17,241 ಮಂದಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರಿದ್ದಾರೆ. 17 ವರ್ಷ ಮೇಲ್ಪಟ್ಟವರು 1,25,406 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳು ಇರಲಿವೆ. ಒಂದು ಮತಗಟ್ಟೆಯಲ್ಲಿ 883 ಜನ ಮತ ಹಾಕಬಹುದಾಗಿದೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ. ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿಯೂ ಶಾಂತಿಯುತ ಮತದಾನ ಆಗುವ ನಂಬಿಕೆ ಇದೆ. ಹಣ, ಇತರ ಆಮಿಷಗಳಿಗೆ ಮತದಾರರು ಒಳಗಾಗಬಾರದು. ಚುನಾವಣಾ ಅಕ್ರಮ ತಡೆಯಲು ಹದ್ದಿನ ಕಣ್ಣಿಡಲಾಗುತ್ತದೆ. ಗಡಿ ಪ್ರದೇಶಗಳು, ಕರಾವಳಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಚುನಾವಣಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.