ಕೇಂದ್ರ ಸರ್ಕಾರದ ಅನುಮತಿಯಿದ್ದರೂ ಸದ್ಯಕ್ಕೆ ರಾಜ್ಯದಲ್ಲಿ ಶಾಲೆ ಆರಂಭಿಸುವುದಿಲ್ಲ : ಸಚಿವ ಸುರೇಶ್ ಕುಮಾರ್.

149
firstsuddi

ಬೆಂಗಳೂರು : ಶಾಲಾ ಕಾಲೇಜು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದರೂ ಕೂಡಾ ರಾಜ್ಯದಲ್ಲಿ ಸದ್ಯಕ್ಕೆ ಶಾಲಾ ಕಾಲೇಜು ತೆರೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಕೂಡಾ ನಾವು ಸದ್ಯಕ್ಕೆ ಶಾಲೆ ತೆರೆಯುವುದಿಲ್ಲ. ಕೂಡಲೇ ಶಾಲೆ ಆರಂಭ ಮಾಡುವ ಯಾವುದೇ ಯೋಚನೆ ನಮಗಿಲ್ಲ. ಈಗಾಗಲೇ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ತರಗತಿ ನಡೆಯುತ್ತಿದೆ. ಕೆಲವು ಶಾಲೆಗಳಲ್ಲಿ ಆನ್‍ಲೈನ್ ಕ್ಲಾಸ್ ಕೂಡಾ ನಡೆಯುತ್ತಿದೆ. ಇನ್ನು ಉಳಿದ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಖಾಸಗಿ ವಾಹಿನಿಗಳಲ್ಲಿ ತರಗತಿ ಆರಂಭಿಸಲು ತೀರ್ಮಾನಿಸಿದ್ದೇವೆ. ಶಾಲೆ ಆರಂಭ ಮಾಡಿದರೆ ಸಿಗುವ ಸಮಯದಲ್ಲಿ ಪಠ್ಯ ಕಡಿತ ಹಾಗೂ ಶನಿವಾರವೂ ತರಗತಿ ನಡೆಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಶಾಲೆಯ ವಿಚಾರದಲ್ಲಿ ಪೋಷಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಭಯ ಹಾಗೂ ಆತಂಕವನ್ನು ನಿವಾರಿಸುವ ಜವಾಬ್ದಾರಿ ನನ್ನದು, ಪೋಷಕರ ಕಾಳಜಿ ಮತ್ತು ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.