ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟ ಬಳಿಕ ಆ್ಯಂಬಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳಿದ್ದ 28 ವರ್ಷದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೊಂಕಿತ ಮಹಿಳೆ ಬೆಂಗಳೂರಿನ ಬೊಮ್ಮನಹಳ್ಳಿಯ ನಿವಾಸಿಯಾಗಿದ್ದು, ಈ ಹಿಂದೆ ಬಿಬಿಎಂಪಿ ಡೋರ್ ಟು ಡೋರ್ ಅಭಿಯಾನದಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿತ್ತು. ಬಳಿಕ ಆಂಬುಲೆನ್ಸ್ ನಲ್ಲಿ ಬಂದ ಇಬ್ಬರು ಆಕೆಯನ್ನು ಕರೆದುಕೊಂಡು ಹೋದರು. ಅಂದಿನಿಂದ ಆಕೆಯ ಸಂಪರ್ಕವೇ ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಳಿಕ ನಾವು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಆ ಹೆಸರಿನ ಯಾವುದೇ ಮಹಿಳೆ ದಾಖಲಾಗಿಲ್ಲ ಎಂದು ಹೇಳಿದರು. ಬಳಿಕ ಬಿಬಿಎಂಪಿಗೂ ನಾವು ಕರೆ ಮಾಡಿದೆವು, ಅವರೂ ಕೂಡ ಅಂದಿನ ಅಭಿಯಾನದ ಬಳಿಕ ಆ ಪ್ರದೇಶದಿಂದ ಸಂಗೀತಾ ಎಂಬ ಹೆಸರಿನಲ್ಲಿಯಾರಿಗೂ ಸೋಂಕು ದೃಢಪಟ್ಟ ಕುರಿತು ವರದಿಯಾಗಿಲ್ಲ. ನಾವು .ಯಾವುದೇ ರೋಗಿಯನ್ನು ಕರೆತರುವಂತೆ ಯಾರಿಗೂ ಸೂಚಿಸಿಲ್ಲ ಎಂದು ಹೇಳಿದರು ಎಂದು ವಿಕಾಸ್ ಹೇಳಿದ್ದಾರೆ. ಅಲ್ಲದೆ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಆಕೆಯನ್ನು ಕರೆದುಕೊಂಡು ಹೋದ ಆ್ಯಂಬುಲೆನ್ಸ್ ಬಿಬಿಎಂಪಿಯದ್ದಲ್ಲ. ಅಲ್ಲದೆ ನಾವು ಯಾವುದೇ ರೀತಿಯ ಕೋವಿಡ್ ಪರೀಕ್ಷೆ ಕೂಡ ನಡೆಸಿಲ್ಲ. ಸ್ವಾಬ್ ಪರೀಕ್ಷೆ ನಡೆಸಿದರೆ ಸಂಬಂಧಪಟ್ಟವರಿಗೆ ಎಸ್ಎಂಎಸ್ ಮೂಲಕ ಸಂದೇಶ ರವಾನಿಸುತ್ತೇವೆ. ಆ್ಯಂಬುಲೆನ್ಸ್ ಸಂಖ್ಯೆ, ಚಾಲಕ ಮತ್ತು ಸಹಾಯಕರ ಮಾಹಿತಿಯನ್ನು ಸೋಂಕಿತರಿಗೆ ತಿಳಿಸುತ್ತೇವೆ. ಅಂತೆಯೇ ನಮ್ಮ ಎಲ್ಲಾ ಆ್ಯಂಬುಲೆನ್ಸ್ ಗಳಿಗೂ ಜಿಪಿಎಸ್ ವ್ಯವಸ್ಥೆ ಇದ್ದು, ಪ್ರತೀ ಕ್ಷಣ ಅವರನ್ನು ಟ್ರ್ಯಾಕ್ ಮಾಡುತ್ತೇವೆ. ಸೋಂಕಿತರನ್ನು ವಾಹನಕ್ಕೆ ಹತ್ತಿಸಿಕೊಂಡ ಬಳಿಕ ಆವರನ್ನು ಆಸ್ಪತ್ರೆಗೆ ದಾಖಲಿಸುವ ವರೆಗೂ ವಾಹನದ ಪ್ರತೀಕ್ಷಣದ ಚಲನೆಯೂ ಕಂಟ್ರೋಲ್ ರೂಮ್ ನಲ್ಲಿ ದಾಖಲಾಗುತ್ತದೆ ಎಂದು ಹೇಳಿದ್ದಾರೆ.
ಇದೀಗ ಮಹಿಳೆ ನಾಪತ್ತೆಯಾಗಿ 4 ದಿನಗಳು ಕಳೆದಿದ್ದು, ಆಕೆ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಪ್ರಸ್ತುತ ಸಂಗೀತಾ ಅವರ ಪತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.










