ಡಾ. ಎಂ.ಎಸ್. ಮಣಿ
ನಾವಿಂದು ಹಿಂದೆಂದೂ ಊಹಿಸಿರದಿದ್ದ ಗಂಡಾಂತರದ ಮಧ್ಯೆ ಇದ್ದೇವೆ. ದೃಶ್ಯ ಮಾಧ್ಯಮಗಳಲ್ಲಿ ವರದಿ ಮಾಡಿದಂತೆ ಕೊರೋನಾ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದಂತಿದೆ. ಜೊತೆಗೆ ದೆಹಲಿ, ರಾಜಸ್ತಾನ, ಆಂಧ್ರ ಪ್ರದೇಶಗಳಲ್ಲಿ ತಗ್ಗುತ್ತಲೂ ಇದೆ. ಆದರೂ ಸಾವು-ನೋವುಗಳು ಹೆಚ್ಚಾಗಿರುವುದು ನಿಜವೇ ಆಗಿದ್ದರೆ ಭಯ-ಭೀತಿಗೆ ಒಳಗಾಗಲೇಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ವೈದ್ಯ ಜೋಶುಹ ಲೆಹೆರ್‌ಬರ್ಗ್ ಕೊರೋನಾ ಉದಯೋನ್ಮುಖ ಮತ್ತು ಪುನರುಜ್ಜೀವನ ರೋಗವೆಂದು ಹೇಳಿದ್ದಾರೆ. ಜೊತೆಗೆ ಏಡ್ಸ್, ಎಬೋಲಾ, ಕಾಲರಾ, ಪ್ಲೇಗ್, ಟಿ.ಬಿ., ಡೆಂಗ್ಯೂ ಯಾವುದಕ್ಕೂ ಮನುಕುಲ ಜಗ್ಗದೆ ಎದೆಯೊಡ್ಡಿ ನಿಂತಿದೆ ಎಂದೂ ತಿಳಿಸಿದ್ದಾರೆ.
ಜನಸಂಖ್ಯೆ, ಬಡತನ, ಪರಿಸರ ಅವನತಿ, ಯುದ್ಧ ದಾಹ, ಸಮೂಹ ಸಾರಿಗೆ, ಸಾಮಾಜಿಕ ಮೇಲ್ವಿಚಾರಣೆ ಮತ್ತು ಹೊಸ, ಹೊಸ ದೋಷಗಳಿಂದ ರೋಗಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ ಎಂದು ಹೃದ್ರೋಗತಜ್ಞವೈದ್ಯ ಡಾ. ನಾಗೇಶ್ ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಕಳಪೆ ಗುಣಮಟ್ಟದ ಗೃಹ ನಿರ್ಮಾಣ, ಅಸಮಾನತೆ, ಆರೋಗ್ಯ ಸೌಲಭ್ಯದ ಕೊರತೆ, ಶಿಕ್ಷಣದ ಕೊರತೆ, ಕೊರೋನಾದಂತಹ ಸೋಂಕಿನ ಹೆಚ್ಚಳಕ್ಕೆ ಕಾರಣ ಎಂದು ಪ್ಲಾಸ್ಟಿಕ್‌ಸರ್ಜರಿ ತಜ್ಞವೈದ್ಯ ಡಾ. ಕೆ.ಟಿ. ರಮೇಶ್ ಹೇಳಿದ್ದಾರೆ.
ಇರಲಿ, ಇವತ್ತಿನ ದಿನಮಾನದಲ್ಲಿ ಧೈರ್ಯವೇ ದೊಡ್ಡ ಶಕ್ತಿ. ಭರವಸೆಯೇ ಶ್ರೇಷ್ಠಧರ್ಮ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ `ರಾಜಕೀಯ’ ಮತ್ತು `ಧರ್ಮ’ ಒಟ್ಟೊಟ್ಟಿಗೆ ಸಾಗುತ್ತಿದೆ. ಕೊರೋನಾದಂತಹ ಸೋಂಕು ಹಿಂದೂ-ಮುಸಲ್ಮಾನರಿಗೆ ಹೊಸದಲ್ಲ. ಹಾಗೆಯೇ ಇವರಿಬ್ಬರಿಗೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಟ್ಟಿಗೆ ಭಾಗವಹಿಸಿಯೂ ಗೊತ್ತಿದೆ.
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಮತ್ತು ಹಿಂಸಾಚಾರಕ್ಕೆ ಕಾರಣವಾದ ಫೇಸ್‌ಬುಕ್ ಪೋಸ್ಟ್ ಹಾಗೂ ನಿಜವಾದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಬದಲು, ಈ ಘಟನೆಯಲ್ಲಿ ಒಂದು ಸಮುದಾಯವನ್ನು ದೋಷಿಯನ್ನಾಗಿಸುವ, ಒಂಟಯಾಗಿಸುವ ಧಾವಂತ ನಡೆದಿದೆ ಎಂದು ಬೆಂಗಳೂರಿನ ನಾಗರಿಕ ಸಮಾಜ ಸಂಘಟನೆಗಳ ಸತ್ಯಶೋಧನಾ ತಂಡ ಅಭಿಪ್ರಾಯ ಪಟ್ಟಿದೆ. ನಾನೊಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಲಾಯಿತು. ಆದರೆ ಬೇರೆ ಸಂಸ್ಥೆಗಳಲ್ಲಿರುವ ಅಧ್ಯಕ್ಷರಾದ ಸುಧಾನು ಮಿತ್ತಲ್ (ಬೋ-ಬೋ), ರಾಜೀವ್ ಮೆಹ್ತಾ (ಫೆನ್ಸಿಂಗ್), ಆನಂದೇಶ್ವರ ಪಾಂಡೆ (ಕಾರ್ಯದರ್ಶಿ, ಹ್ಯಾಂಡ್‌ಬಾಲ್) ನಿಯಮ ಉಲ್ಲಂಘನೆ ಮಾಡಿದರೂ ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಷ್ತಾಕ್ ಅಹ್ಮದ್ ಆರೋಪಿಸಿದ್ದರು. ಹೀಗೆ `ಧರ್ಮ’ ಎಂಬುದು ಪ್ರತಿಯೊಂದು ವಿಚಾರದಲ್ಲಿಯೂ ಚಾಚಿಕೊಂಡಿದೆ. ಅದು ಪೌರತ್ವ ತಿದ್ದುಪಡಿ ಮಸೂದೆಯೂ ಆಗಿರಬಹುದು. ದೆಹಲಿಯ ಗಲಭೆಯೂ ಆಗಿರಬಹುದು. ತ್ರಿವಳಿ ತಲಾಖ್ ಕೂಡ ಆಗಿರಬಹುದು. ರಾಮಮಂದಿರ, ಶಬರಿ ದೇಗುಲ ಪ್ರಕರಣವೂ ಆಗಿರಬಹುದು. ಎಲ್ಲದರಲ್ಲಿಯೂ `ಧರ್ಮದ ಘಾಟು’, `ಲಿಂಗ ತಾರತಮ್ಯ’ ಕಾಣಿಸಿಕೊಂಡಿದೆ. ಬಹುಶಃ ಇವೆಲ್ಲವನ್ನೂ ಗಮನಿಸಿಯೇ ಕೋವಿಡ್-19 ಹತ್ತಿಕ್ಕುವ ಬದಲು, ಪೂರ್ವಾಗ್ರಹಪೀಡಿತ ಕೋಮುವಾದ, ದ್ವೇಷಭಾವನೆ ಬೆಳೆಸಲಾಗುತ್ತಿದೆ. ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟುಬೀಳುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ಇವತ್ತು `ಮದರ್ ಇಂಡಿಯಾ’ ಸಾಂಕ್ರಾಮಿಕ ರೋಗಗಳಿಗೆ ಒಳಗಾಗುವ ಕಾರಣಗಳಿಂದ ಅಸಮರ್ಪಕ ಹೊರೆಯನ್ನು ಹೆಚ್ಚಾಗಿ ಹೊತ್ತಿದ್ದಾರೆ. `ಬಡತನ’ ಮತ್ತು `ನಿರುದ್ಯೋಗ’, `ಸಾಮಾಜಿಕ ಅಂತರ’ ಅಥವಾ `ಸಾಂಕೇತಿಕ ಜನತಾ ಕರ್ಫ್ಯೂ’ನ ಮುನ್ನೆಚ್ಚರಿಕೆಯ ಕ್ರಮಗಳ ಮೂಲಕ ನಾವಿದನ್ನು ಅರ್ಥಮಾಡಿಕೊಳ್ಳಬೇಕಿದೆ.
ದಿನವೂ ದುಡಿದು ತಿನ್ನುವವರಿಗೆ ಒಂದು ದಿನವೂ ಕೆಲಸ ತಪ್ಪಿಸುವಂತಿಲ್ಲ ಎಂಬ ಮಾತುಗಳು ಅಧಿಕಾರಸ್ಥರ ಬಾಯಿಂದ ಹೊರಬಂದಿದೆಯಾದರೂ ಜಾರಿಗೆ ಬಂದಿಲ್ಲ. ಹೀಗಿರುವಾಗ ತಿನ್ನಲು ಅನ್ನ ಇಲ್ಲದಿದ್ದರೆ ಅದ್ಹೇಗೆ ಸಾಮಾಜಿಕ ಅಂತರ ಅಥವಾ ದೈಹಿಕ ಅಂತರವನ್ನು ಕಾಪಾಡಿಕೊಳ್ಳುವರು. ಇದನ್ನು ಊಹಿಸುವುದು ಅಸಾಧ್ಯ. ಸ್ವಯಂ ನಿಯಂತ್ರಣಕ್ಕೆ ಒಳಗಾಗಿ, ದೇಶಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಕರೆ ಅದ್ಹೇಗೆ ಹಸಿದ ಹೊಟ್ಟೆಯ ಜನರ ಕಿವಿಗೆ ಕೇಳಿಸುತ್ತದೆ.
ಬಡಜನ ಜೀವಹಿಡಿದು ಬದುಕುಳಿಯಬೇಕಾದರೆ, ಕೆಲವೊಂದು ಅಪಾಯಗಳನ್ನು ಎದುರಿಸಬೇಕಿದೆ. ಆಳುವ ಸರ್ಕಾರಗಳು ನೆರವು ನೀಡದೆ, ಸೋಂಕಿನ ಕಾರಣ ಕೊಟ್ಟು ಅಪಾಯಕ್ಕೆ ದೂಡುವುದು ಸರ್ವಥಾ ಸೂಕ್ತವಲ್ಲ. ಕೊರೋನಾದಂತಹ ಅಪಾಯ ಎದುರಿಸುವುದರಿಂದ ಮುಂದಿನ ಭವಿಷ್ಯ ಹೇಗೆ ನಿರ್ಮಾಣವಾಗುತ್ತದೆ ಎಂಬ ಚಿಂತೆ ಬಡಜನರನ್ನು ಕಾಡುತ್ತಿದೆ. ಸೋಂಕು ಒಂದು ಅಪಾಯ. ಆದರೆ, ಬಡಜನರು ಎದುರಿಸುವ ಹಲವು ಅಪಾಯಗಳಲ್ಲಿ ಇದು ಕೂಡ ಒಂದಾಗಿದೆ.
ಇದರ ನಡುವೆ ಮಾಧ್ಯಮಗಳು ಶಾಹೀನ್ ಬಾಗ್‌ನ್ನು ತೋರಿಸಿದವು. ನೆನಪಿರಲಿ, `ಜಾತ್ಯಾತೀತ’ ಎಂದರೆ ಎಲ್ಲಾ ಧರ್ಮ ಮತ್ತು ಪಂಥಗಳನ್ನು ಸಮಾನವಾಗಿ ಗೌರವಿಸಬೇಕು. ಆದರೆ ಇದೀಗ ಧಾರ್ಮಿಕತೆಯ ಆಧಾರದ ಮೇಲೆ ತಾರತಮ್ಯವನ್ನು ಕೆಲವರು ಬಹಿರಂಗವಾಗಿ, ಇನ್ನೂ ಕೆಲವರು ರಹಸ್ಯವಾಗಿಯೂ ಮಾಡುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯು ಧರ್ಮವನ್ನು ಆಚರಿಸುವ, ಅನುಸರಿಸುವ ಸ್ವಾತಂತ್ರ್ಯದ ಹಕ್ಕನ್ನು ಹೊಂದಿರುತ್ತಾರೆ. ಇದನ್ನು ಯಾರೂ ಮೊಟಕುಗೊಳಿಸಲು ಸಾಧ್ಯವಿಲ್ಲ. ಧಾರ್ಮಿಕ ಆಚರಣೆ ಯಾವುದೇ ರೀತಿಯಲ್ಲೂ ಉಲ್ಲಂಘನೆಯಲ್ಲ. ಅಲ್ಲದೆ ಅಲ್ಪಸಂಖ್ಯಾತ ಧರ್ಮಗಳಿಗೆ ಸೇರಿದವರನ್ನು ಅಪರಾಧೀಕರಿಸುವುದು ಬೇಷರತ್ತಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
ಸಹಭಾಗಿತ್ವದ ಪ್ರಜಾಪ್ರಭುತ್ವದಲ್ಲಿ ನಾವು ರಾಜಕೀಯ, ನೀತಿ, ಕಾರ್ಯಸೂಚಿ ಮತ್ತು ಚುನಾವಣೆಯನ್ನು ಸಂಘಟಿಸುತ್ತೇವೆ. ಹೀಗಾಗಿ ಎಲ್ಲಾ ಧರ್ಮೀಯರಲ್ಲೂ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಇಂತಹ ಆದರ್ಶವನ್ನು ಸರ್ಕಾರ ಮತ್ತು ನಾಗರಿಕ ಸಮಾಜದ ಕಾನೂನುಗಳು ಮತ್ತು ಆತ್ಮಸಾಕ್ಷಿಯ ಸಂಪ್ರದಾಯಗಳು, ಸಾರ್ವಜನಿಕ ಅಭಿಪ್ರಾಯಗಳು ಉತ್ತೇಜಿಸಬೇಕು.
ಇದನ್ನೇಕೆ ಪ್ರಸ್ತಾಪಿಸಬೇಕಾಯಿತೆಂದರೆ, ಕೊರೋನಾ ಸೋಂಕು ಎದ್ದ ನಂತರ ಹೊಸ ಬೆಳವಣಿಗೆಯಾಗಿದೆ. ಅದು `ಅವರು’ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಲಾಗಿದೆ. `ಅವರ’ ಬಳಿ ಏನನ್ನು ಖರೀದಿಸಬೇಡಿ. `ಆ’ ಧರ್ಮದವರು ಕೊರೋನಾವಾಹಕರಾಗಿದ್ದಾರೆ. ಇಂತಹ ಮಾತುಗಳು ಕೆಳ, ಮಧ್ಯಮವರ್ಗ ಮತ್ತು ಉನ್ನತವರ್ಗ ವಾಸಿಸುವ ಪ್ರದೇಶಗಳಲ್ಲಿ ಅಕ್ಷರಸ್ಥರು, ಅನಕ್ಷರಸ್ಥರೆಂಬ ಭೇದಭಾವ ಇಲ್ಲದೆ ಹರಿದಾಡುತ್ತಿದೆ.
ಇದನ್ನು ಗಮನಿಸಿದಾಗ ನಾವು ಖಂಡಿತವಾಗಿಯೂ ಕೋಮುವಾದಿಯಾಗಿದ್ದೇವೆ, ಜಾತ್ಯಾತೀತವಾಗಿ ಉಳಿದಿಲ್ಲ ಎನಿಸುತ್ತಿದೆ. ಆದರೆ `ಕೊರೋನಾವೈರಸ್’ ಜಾತ್ಯಾತೀತವಾಗಿ ಉಳಿದಿದೆ. ಇಂತಹ ಚಿಂತನೆಗಳು ಸ್ಪಷ್ಟವಾಗಿ ಸಂವಿಧಾನವನ್ನು ಉಲ್ಲಂಘಿಸುತ್ತದೆ. ಇದು ನಮ್ಮ ಸುತ್ತಲೂ ನಿರ್ಮಿಸಿಕೊಂಡಿರುವ `ಕೋಮು’ ಗೋಡೆಯನ್ನು ತೋರಿಸುತ್ತದೆ. ಇದೊಂದು `ಧರ್ಮದ ಕಟ್ಟುಪಾಡು’ ಎಂದು ನಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ವಿಶ್ವ ಭೂಪಟವು ಕೋಮುವಾದಿಯಲ್ಲ ಎಂಬುದಕ್ಕೆ ಪುರಾವೆ ಇದೆ. ಅಮೆರಿಕಾ, ಬ್ರೆಜಿಲ್, ರಷ್ಯಾ, ಚೀನಾ, ಇರಾನ್, ಟೋಕಿಯೋ, ಇಸ್ರೇಲ್ ಇಲ್ಲಿ ಬೇರೆ, ಬೇರೆ ಧರ್ಮಗಳಿವೆ. ಇಲ್ಲೆಲ್ಲೂ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಟೀಕಿಸಿಲ್ಲ.
ಇರಲಿ, ಮನೆಕೆಲಸ ಮಾಡುವವರು ಕೂಡಾ ಸಾಮಾಜಿಕ ಅಂತರ ದಿಂದ ಮಾತ್ರ ಭಾಧನೆಗೊಳಗಾಗಿಲ್ಲ. ಸಮಾಜದಲ್ಲಿರುವ ಜಾತಿ ವ್ಯವಸ್ಥೆಯಿಂದಾಗಿಯೂ ಸಾಮಾಜಿಕ ಅಂತರದ ಪೀಡನೆಗೊಳಗಾಗಿದ್ದಾರೆ. ಲಿಂಗಾಧಾರಿತವಾಗಿಯೂ ಬಹಳಷ್ಟು ಪೀಡಿತರಾಗಿದ್ದಾರೆ. ಹಾಗೆಯೇ ತಾರತಮ್ಯಕ್ಕೂ ಒಳಗಾಗಿದ್ದಾರೆ. ಇವರುಗಳ ಕುರಿತು ಸಮೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ ವಿಶೇಷವಾಗಿ ಸಾಂಕ್ರಾಮಿಕ ಮತ್ತು ಮಾಲಿನ್ಯ ಕಲ್ಪನೆಗಳು ಹೇಗೆ ಬಾಧಿಸುತ್ತವೆ ಎಂಬುದನ್ನು ವಿವರಿಸಲಾಗಿದೆ.
ನನ್ನ ಮನೆಯ ಮುಂಭಾಗದಲ್ಲಿ ಪಾರ್ಕ್ ಒಂದಿದೆ. ಅದರಲ್ಲಿ ಆರೇಳು ಜನ ಹೆಂಗಸರಿರುವ ಪಾವಗಡ ಮೂಲದ ಕುಟುಂಬ ಇದೆ. ಆ ಕುಟುಂಬದ ಹೆಣ್ಮಕ್ಕಳು ಇಲ್ಲಿನ ಹತ್ತಾರು ಮನೆಗಳಲ್ಲಿ ಮನೆಕೆಲಸ ಮಾಡುತ್ತಿದ್ದರು. ಕೆಲವರು ಎಲ್ಲಿ ಸೋಂಕು ಹರಡಿಬಿಡುವರೆಂದು ಹೆದರಿ `ಸೋಮವಾರ’ ಬಾ ಎಂದು ಆರು ತಿಂಗಳಿ ನಿಂದ ಸಾಗಹಾಕುತ್ತಲೇ ಇದ್ದಾರಂತೆ. ಇಲ್ಲಿನ ಮನೆಯವರು ತಮ್ಮ ಹಕ್ಕು ಸಾಧಿಸಿ ಜವಾಬ್ದಾರಿ ನಿರ್ವಹಿಸಿದರೆ ಹೊರತು, ಪಾಪದ ಜನಕ್ಕೆ ಒಂದ್ಹೊತ್ತಿಗಾಗುವಷ್ಟು ಧವಸ-ಧಾನ್ಯವನ್ನು ನೀಡಿರುವುದಿಲ್ಲ. ನಿಷ್ಠುರವಾಗಿ ಕೆಲಸದಿಂದ ನಿಲ್ಲಿಸಿದ್ದಾರೆ.
ಇವರಲ್ಲಿ ಒಬ್ಬಾಕೆ ಭಯಾನಕ ಸತ್ಯವೊಂದನ್ನು ಹೊರಗೆಡವಿದಳು. ಒಂದು ಮನೆಯಲ್ಲಿ ಕೆಲಸದಿಂದ ನಿಲ್ಲಿಸಿದ ಮೇಲೆ ಭಾನುವಾರ ಒಂದು ದಿನ ಕರೆದರಂತೆ. ಯಥಾಪ್ರಕಾರ ಈಕೆ ಅಡುಗೆಮನೆಗೆ ಹೋಗಿ ಗಾಭರಿಗೊಳಗಾಗಿದ್ದಾರೆ. ಕಾರಣ, ಅಲ್ಲಿ ಮೂರು ದಿನಗಳಿಂದ ನೀರು ಕಾಣದೆ ತಿಂದು, ತೊಳೆಯಲು ಹಾಕಿದ್ದ ಪಾತ್ರೆ, ತಟ್ಟೆ, ಲೋಟಗಳ ರಾಶಿ ಬಿದ್ದಿದ್ದವಂತೆ. ಜಿರಲೆಗಳ ರಾಶಿ ತುಂಬಿ, ಅನ್ನ, ಸಾರು, ಮೊಟ್ಟೆ, ಮಾಂಸಗಳ ಹಳಸಿದ ವಾಸನೆ ಹರಡಿ ಕೊಂಡಿತಂತೆ. ನೋಡಿ ಸಾರ್, ನಾವು ರೋಗ ಹೊತ್ತು ತರುತ್ತೇವೆ ಎನ್ನುತ್ತಾರೆ. ಆದರೆ, ಇವರೇ ದುರ್ವಾಸನೆ ಬರುವ ಪಾತ್ರೆಗಳ ರಾಶಿಯನ್ನು ತೊಳೆಯಲು ಹೇಳಿ ನಮಗೆ ರೋಗ ಅಂಟಿಸಿಬಿಡುತ್ತಾರೆ. ಅವರು ನಮ್ಮನ್ನು ಕೊಳಕರೆನ್ನುತ್ತಾರೆ. ಆದರೆ, ಅವರೇ ಹೊಲಸನ್ನು ತುಂಬಿಕೊಂಡಿದ್ದಾರೆ ಎಂದಳು.
ಈಕೆ ಇನ್ನೊಂದು ಮನೆಗೂ ಪಾತ್ರೆ ತೊಳೆಯಲು ಹೋಗುತ್ತಿದ್ದಳು. ಅಲ್ಲಿಯೂ ನಾಲ್ಕು ದಿನಗಳಿಂದ ಪಾತ್ರೆ ತೊಳೆದಿರಲಿಲ್ಲವಂತೆ. ಆ ಮನೆಯವರು ರಾಶಿ ಸಾಮಾನು ತೊಳೆಯಲು ಹೇಳಿ 100 ರೂಪಾಯಿ ಮಾತ್ರ ಕೊಡುವುದಾಗಿ ಹೇಳಿದ್ದಾರೆ. ಪಾತ್ರೆ ತೊಳೆದ ನಂತರ ಅಡುಗೆಮನೆಯನ್ನು ಸ್ಯಾನಿಟೈಜ್ ಮಾಡಲು ಹೇಳಿದ್ದಾರೆ. ಇದು ನ್ಯಾಯನಾಸಾರ್ ಎಂದಾಗ ನಾನು ಮೂಕನಾದೆ.
ನನಗಿಲ್ಲೊಂದು ಅರ್ಥವಾಗುತ್ತಿಲ್ಲ. ತಬ್ಲಿಗಿ ಜಮಾತ್ ಘಟನೆ, ಸಿಖ್ ಬೋಧಕ 40 ಸಾವಿರ ಜನರನ್ನು ಕ್ವಾರೆಂಟೈನ್ ಮಾಡಿದ್ದನ್ನು, ದಕ್ಷಿಣ ಕೊರಿಯಾದ ಕ್ರೈಸ್ತ ಸಂಘ ಅಥವಾ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಹರಡಿದ ಸೋಂಕು ಪ್ರಕರಣಗಳಲ್ಲಿ ಧರ್ಮಾತೀತವಾಗಿ ಎಲ್ಲವನ್ನೂ ಟೀಕಿಸಲಾಗಿದೆ.
ಮೇಲಿನ ಎಲ್ಲಾ ಪ್ರಕರಣಗಳಲ್ಲೂ ಆಯಾ ದೇಶದ ಅವರವರ ಧರ್ಮವನ್ನು ಟೀಕಿಸಿ, ದುರುಪಯೋಗಪಡಿಸಿಕೊಳ್ಳಲಾಗಿದೆ. ಟೀಕೆಯ ಭರದಲ್ಲಿ ಇವರುಗಳು ಮಾನವೀಯತೆಯನ್ನು ಮರೆತರೆಂಬುದೆ ಗಮನಾರ್ಹ ಸಂಗತಿಯಾಗಿದೆ. ಇವೆಲ್ಲ ಪ್ರಕರಣಗಳನ್ನು ನಮ್ಮ ದೇಶ ಒಂದೇ ರೀತಿಯಲ್ಲಿ ಕಂಡಿದೆ. ಹೀಗಾಗಿ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿರುವ ಆದರ್ಶ ಮೌಲ್ಯಗಳಾದ `ನ್ಯಾಯ’, `ಸ್ವಾತಂತ್ರö್ಯ’, `ಸಮಾನತೆ’ ಹಾಗೂ `ಭ್ರಾತೃತ್ವ’ವನ್ನು ಮರೆತುಹೋಗಿದೆಯೇ ಎಂಬ ಚಿಂತೆಯೂ ಕಾಡುತ್ತಿದೆ.
ಇಷö್ಟಕ್ಕೂ `ಜಾತ್ಯಾತೀತತೆ’ ಎಂಬುದು ಇತ್ತೀಚಿನ ಪದವಲ್ಲ. ಇದರ ಆಚರಣೆಯು ರಾಜಕೀಯ ಮತ್ತು ಸಾಮಾಜಿಕ ಆದ್ಯತೆಯನ್ನು ಹೊಂದಿದೆ. ಇದು ಪ್ರಾಚೀನ ಭಾರತದ ಪರಂಪರೆಯಲ್ಲಿಯೇ ಇತ್ತು. ಪ್ರಾಚೀನ ಭಾರತೀಯರ ಬಳುವಳಿ ಇದಾಗಿದೆ. ಸಾಮ್ರಾಟ್ ಅಶೋಕನ ಶಿಲಾಶಾಸನ ಮತ್ತು ಸ್ತಂಭ ಶಾಸನಗಳು ಇದನ್ನು ಸಾರಿ ಹೇಳುತ್ತವೆ. ಪ್ರತಿಯೊಂದು ಧರ್ಮವನ್ನು ಸಮಾನವಾಗಿ ಕಾಣಬೇಕು. ಎಲ್ಲರೂ ಪೂಜಾರ್ಹರಾಗಿದ್ದಾರೆ. ತನ್ನ ಧರ್ಮವೇ ಶ್ರೇಷ್ಠ ಎಂದು ಸಾರುತ್ತ, ಮತ್ತೊಂದು ಧರ್ಮವನ್ನು ಹಿಯ್ಯಾಳಿಸುವವ ತನ್ನದೇ ಧರ್ಮಕ್ಕೆ ಭರಿಸಲಾಗದ ಹಾನಿಯುಂಟು ಮಾಡುತ್ತಾನೆಂದು ಸಾಮ್ರಾಟ್ ಅಶೋಕ ಹೇಳಿದ್ದ. 1590ರಲ್ಲಿ ಸಾಮ್ರಾಟ್ ಅಕ್ಬರ್ ಕೂಡ ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಪಾರ್ಸಿ, ಯಹೂದಿಯರೊಂದಿಗೆ ಧಾರ್ಮಿಕ ಜಿಜ್ಞೆಸೆಯನ್ನು ನಡೆಸುತ್ತಿದ್ದನು. ಜೊತೆಗೆ ಯಾರೊಬ್ಬರು ಇತರ ಧರ್ಮಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಹೇಳಿದ್ದನು. ಅಲ್ಲದೆ, ತನ್ನ ಜನರ ಧಾರ್ಮಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯವು ವಿವಿಧ ಧರ್ಮಗಳಿಂದ ಸಮಾಜವಾಗಿ ಕೂಡಿರಬೇಕೆಂದಿದ್ದ. ಯಾವುದೇ ಧರ್ಮವನ್ನು ವಿಶೇಷವಾಗಿ ಪರಿಗಣಿಸಬಾರದೆಂದು ಕಟ್ಟಪ್ಪಣೆ ಹೊರಡಿಸಿದ್ದನು. ಇದೇ ರೀತಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರು 1947ರ ಜೂನ್ 10ರಂದು ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರಿದ್ದಾರೆ. ಜಾತಿ ಮತ್ತು ಧರ್ಮದ ಹೊರತಾಗಿಯೂ ದೇಶವೂ ಎಲ್ಲರಿಂದಲೂ ಕೂಡಿದೆ. ದೇಶದ ಮೇಲೆ ಎಲ್ಲರೂ ಅವಲಂಬಿತರಾಗಿದ್ದಾರೆ. ಹೀಗಾಗಿ `ಜಾತ್ಯಾತೀತತೆ’ಯನ್ನು ನೀತಿಯಾಗಿ ರೂಪಿಸಲಾಗುವುದು ಎಂದಿದ್ದರು. ಇಂತಹ ಎಲ್ಲಾ ಚರ್ಚೆಗಳ ನಂತರವಷೆ `ಜಾತ್ಯಾತೀತತೆ’ಯನ್ನು ರಾಜ್ಯನೀತಿಯನ್ನಾಗಿ ಪರಿಗಣಿಸಲಾಯಿತು. ಯೂರೋಪ್ ಸಹ ಒಂದು ಕಾಲಘಟ್ಟದಲ್ಲಿ ಅಸಹಿಷ್ಣುತೆಯಿಂದ ಬೇಯುತ್ತಿತ್ತು. ಅಲ್ಲಿನ ತತ್ವಜ್ಞಾನಿ ಗಣಿತಜ್ಞ, ಕವಿ ಗಿಯಾರ್ಡಾನೋ ಬ್ರುನೋ ವೈಚಾರಿಕವಾಗಿ, ವೈಜ್ಞಾನಿಕವಾಗಿ ಚಿಂತಿಸುತ್ತಿದ್ದ. ಇವನನ್ನು ಪ್ರಚೋದಕ, ಧರ್ಮದ್ರೋಹಿ ಎಂಬೆಲ್ಲ ವಿಶೇಷಣ ಕೊಟ್ಟು ಜೀವಂತವಾಗಿ ದಹಿಸಿಬಿಟ್ಟರು.
ಇದೀಗ ನಿಮಗೆ ಕೊರೋನಾ ಹರಡುವಿಕೆಗೆ ಯಾವುದೇ ಒಂದು ಧರ್ಮ ಕಾರಣವಲ್ಲ ಎಂಬುದು ಸ್ವಲ್ಪವಾದರೂ ಅರಿಯಲು ಮನಸ್ಸು ಹದವಾಗಿರಬಹುದು. ಆದರೆ, ಇಂದಿನ ಸಾಮಾಜಿಕ ಮಾಧ್ಯಮದ ದಿನಮಾನಗಳಲ್ಲಿ ನಡೆಯುತ್ತಿರುವ ಚರ್ಚೆಯ ದಿಕ್ಕು ಗಮನಿಸಿದಾಗ ನನ್ನ ಅನಿಸಿಕೆ ಸುಳ್ಳಾಗಬಹುದೆಂಬ ಅನುಮಾನವೂ ಇದೆ. ಕಾರಣ, ಕೆಲವರನ್ನು ಬದಲಾಯಿಸಲು ಆಗದಷ್ಟು ತೀವ್ರವಾಗಿ ಪರಿವರ್ತಿತರಾಗಿಬಿಟ್ಟಿದ್ದಾರೆ. ಇದಕ್ಕೆ ರಾಜಕೀಯ ಪಕ್ಷಗಳು ಸಾಕಿಕೊಂಡು ಬಿತ್ತಿಸುತ್ತಿರುವ ಟ್ರೋಲಿಗರು `ಅವರ’ ಬಗ್ಗೆ ಹೊಸ ಬಗೆಯ ವ್ಯಕ್ತಕಿತ್ವವನ್ನೇ ಕಟ್ಟುಕೊಟ್ಟುಬಿಟ್ಟಿದ್ದಾರೆ. ಇದು ಮುಂದಿನ ದಿನಗಳಲ್ಲೂ `ಅವರ’ ಬಗ್ಗೆ ಬಳಕೆಯಾಗುವ ಎಲ್ಲಾ ಸಾಧ್ಯತೆಗಳು ಇವೆ.










