ಗಂಡು ಮಗುವಿಗೆ ಜನ್ಮ ನೀಡಿದ 10ನೇ ತರಗತಿ ವಿದ್ಯಾರ್ಥಿನಿ- ಸಹೋದರ ಅರೆಸ್ಟ್…

61
firstsuddi

ಕಲಬುರಗಿ: ಎಸ್​ಎಸ್​ಎಲ್​ಸಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣವೊಂದು ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ವಿದ್ಯಾರ್ಥಿನಿಯ ದೊಡ್ಡಪ್ಪನ ಮಗನೇ ಕೃತ್ಯ ಎಸಗಿರುವುದಾಗಿ ಬಯಲಾಗಿದೆ. ಅಲ್ಲದೇ ಪ್ರಕರಣ ಸಂಬಂಧ ಆರೋಪಿಯನ್ನು ಕೂಡ ಆಳಂದ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿನಿ, ಜಿಲ್ಲೆಯ ಅಫಜಲಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಶಾಲೆಗೆ ರಜೆ ಇದ್ದಾಗೆಲ್ಲ ಆಕೆ ಮನೆಗೆ ಬರುತ್ತಿದ್ದಳು. ಹೀಗೆ ಬಂದಾಗ ಸಹೋದರ ಆಕೆಯನ್ನು ಬಳಸಿಕೊಳ್ಳುತ್ತಿದ್ದನು. ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆತ ತಂಗಿ ಎನ್ನುವುದನ್ನೂ ನೋಡದೇ ರೇಪ್ ಮಾಡುತ್ತಿದ್ದ. ಹೀಗೆ ಕಳೆದ ಮಾರ್ಚ್ ನಿಂದ ವಿದ್ಯಾರ್ಥಿನಿ ಹಲವು ಬಾರಿ ತನ್ನ ಅಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಅಲ್ಲದೇ ಈ ವಿಚಾರವನ್ನು ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದನು. ಹೀಗಾಗಿ ಆಕೆ ಅತ್ಯಾಚಾರ ವಿಚಾರವನ್ನು ಮುಚ್ಚಿಟ್ಟಿದ್ದಳು.

ಇತ್ತ ವಿದ್ಯಾರ್ಥಿನಿ ದಪ್ಪ ಇರೋದ್ರಿಂದ ಕುಟುಂಬಸ್ಥರು ಕೂಡ ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಕಂಡು ಹಿಡಿಯುವ ಪ್ರಯತ್ನ ಮಾಡಿಲ್ಲ. ಆದರೆ ಡಿಸೆಂಬರ್ 24 ರಂದು ಶಾಲೆಯಲ್ಲಿ ಇದ್ದಾಗ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಹಾಸ್ಟೇಲ್ ಸಿಬ್ಬಂದಿ ಬಾಲಕಿಯನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದರು. ಹೊಟ್ಟೆ ನೋವು ತೀವ್ರವಾದಾಗ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ. ಸ್ಕ್ಯಾನಿಂಗ್ ನಲ್ಲಿ ಬಾಲಕಿ ಗರ್ಭಿಣಿಯಾಗಿರುವ ವಿಷಯ ಬಯಲಾಗಿದೆ. ಡಿಸೆಂಬರ್ 28ರಂದು ಬಾಲಕಿಗೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿದೆ.

ಮಗಳ ಪರಿಸ್ಥಿತಿ ಕಂಡು ಹೆತ್ತವರು ಕಣ್ಣೀರು ಇಟ್ಟಿದ್ದಾರೆ. ಬಾಲಕಿಯನ್ನು ತಾಯಿಯಾಗಿಸಿದವನು ಆಕೆಯ ಸಹೋದರ (ದೊಡ್ಡಪ್ಪನ ಮಗ) ಎಂಬ ವಿಚಾರ ಹೆತ್ತವರಿಗೆ ಹೆಚ್ಚಿನ ನೋವು ತಂದಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಸೊಲ್ಲಾಪುರದ ಆಸ್ಪತ್ರೆಯವರ ಮಾಹಿತಿ ಮೇರೆಗೆ ಕಲಬುರಗಿ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಅಡಿ ದೂರು ದಾಖಲಾಗಿದ್ದು ಬಾಲಕಿಯ ಈ ಸ್ಥಿತಿಗೆ ಕಾರಣವಾದ ಸಹೋದರ ಸಂಬಂಧಿ ಯುವಕನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.