ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್‍ಶೆಟ್ಟಿ ಅವರಿದ್ದ ಪೀಠ, ಜಾಮೀನು ಪುರಸ್ಕರಿಸಿದೆ. ಆರೋಪಿಗಳಾದ ಹುಕ್ಕೇರಿಯ ಭರತ್ ಜಯವಂತ ಕುರಾನೆ(42), ಮಹಾರಾಷ್ಟ್ರದ ಶ್ರೀಕಾಂತ್ ಪಂಗರ್ಕರ್ (48), ಶಿಕಾರಿಪುರದ ಸುಜಿತ್ ಕುಮಾರ್ (42), ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಲೇಕರ್ (43) ಜಾಮೀನು ಪಡೆದರು. ಪ್ರಕರಣದ 18 ಆರೋಪಿಗಳಲ್ಲಿ ಎಂಟು ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಹಿಂದೆ ನಾಲ್ವರು ಆರೋಪಿಗಳು ಜಾಮೀನು ಪಡೆದಿದ್ದರು, ಆರೋಪಿಗಳಿಗೆ ಷರತ್ತು ವಿಧಿಸಿ ಜಾಮೀನು ನೇಡಲಾಗಿದೆ.
ಈ ಎಲ್ಲಾ ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕಬಾಂಡ್, ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಾ ದಿನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲ ದಿನ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು. ಆರೋಪಿಗಳು ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪದಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಆರೋಪಿಗಳ ವಿರುದ್ದ 2017 ರಲ್ಲಿ ರಾಜೇಶ್ವರಿ ನಗರ ಪೊಲೀಸರು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ, ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳು 2018 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.










