ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೈದ್ಯ.

76
firstsuddi

ಬೆಂಗಳೂರು: ಕಾಮುಕ ವೈದ್ಯನೊಬ್ಬ ಚಿಕಿತ್ಸೆಗೆ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಯುವತಿ ತನ್ನ ಅಜ್ಜಿಯೊಂದಿಗೆ ಚಂದ್ರಾಲೇಔಟ್ ಬಳಿ ಇರುವ ಅರುಂಧತಿ ನಗರದಲ್ಲಿರುವ ವೈದ್ಯ ಉಬೇದುಲ್ಲನ ಕ್ಲಿನಿಕ್ ಗೆ ಹೋಗಿದ್ದಾಳೆ. ಚಿಕಿತ್ಸೆ ನೀಡುವುದಾಗಿ ಯುವತಿಯನ್ನು ಬೆಡ್ ಮೇಲೆ ಮಲಗಿಸಿ ಡ್ರಿಪ್ಸ್ ಹಾಕಿದ್ದಾನೆ. ಈ ವೇಳೆ ಅಜ್ಜಿಯನ್ನ ಹೊರ ಕೂರುವಂತೆ ಹೇಳಿ ಕಾಮುಕ ವೈದ್ಯ ಯುವತಿಯ ಮೈ ಕೈ ಮುಟ್ಟಿ ಕುಚೇಷ್ಠೆ ಮೆರೆದಿದ್ದಾನೆ.

ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ ಎದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದ, ಅಲ್ಲದೆ ಇದನ್ನ ಹೇಳಿದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿ ಮನೆಗೆ ಕಳಿಸಿದ್ದನು. ಹೀಗಾಗಿ ವೈದ್ಯನಿಗೆ ಹೆದರಿ ಯಾರಿಗೂ ಹೇಳದೆ ಸುಮ್ಮನಿದ್ದಳು. ನಂತರ ಘಟನೆಯಿಂದ ಭೀತಿಗೊಂಡಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡಿತ್ತು.

ಹೀಗಾಗಿ ಮನೆಯವರು ಆಕೆಯನ್ನು ಮತ್ತೆ ಅದೇ ಕ್ಲಿನಿಕ್ ಗೆ ಕರೆದೊಯ್ಯಲು ಮುಂದಾದಾಗ ಯುವತಿ ಹಿಂದೇಟು ಹಾಕಿದ್ದಾಳೆ. ಈ ವೇಳೆ ಆಕೆಯ ಅಣ್ಣಂದಿರು ಕಾರಣ ಕೇಳಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರರು ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ.

ಘಟನೆಯ ನಂತರ ಕಾಮುಕ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.