ಚಿಕ್ಕಮಗಳೂರು : ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲೇ ರೈತರು ಮತ್ತು ವರ್ತಕರು ವ್ಯಾಪಾರ ವಹಿವಾಟನ್ನು ನಡೆಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಸೂಚಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಡಬ್ಲ್ಯೂ.ಐ.ಎಫ್ ನಬಾರ್ಡ್ ಯೋಜನೆಯಡಿ 38 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಮುಚ್ಚು ಹರಾಜು ಕಟ್ಟೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೃಷಿ ಮಾರುಕಟ್ಟೆ ರೈತರಿಗೆ ದೇವಾಲಯವಿದ್ದ ಹಾಗೆ, ಅದನ್ನು ಸ್ಚಚ್ಚ ಮತ್ತು ವ್ಯವಸ್ಥಿತವಾಗಿ ನಡೆಸಬೇಕು, ಕೃಷಿಕರಿಗೆ ಮೋಸವಾಗದ ರೀತಿ ವ್ಯವಹಾರ ಮಾಡಬೇಕು, ನಿಗದಿಪಡಿಸಿದ ಸ್ಥಳವನ್ನು ಬಿಟ್ಟು ಅಡ್ಡಾದಿಡ್ಡಿಯಾಗಿ ವ್ಯಾಪಾರ ಮಾಡಿದರೆ ಮಾರುಕಟ್ಟೆಯ ವ್ಯವಸ್ಥೆ ಹಾಳಾಗುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು.
ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಅವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದ ಅವರು ನಿಗದಿಪಡಿಸಿದ ಸ್ಥಳವನ್ನು ಬಿಟ್ಟು ಬೇರೆಡೆ ವ್ಯಾಪಾರ ಮಾಡುವ ಗ್ರಾಹಕರಿಗೆ ಸಮಿತಿಯಿಂದ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಸಮಿತಿಯ ಸದಸ್ಯ ಬಿ.ಹೆಚ್.ಹರೀಶ್ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಿಗುವ ಸವಲತ್ತುಗಳನ್ನು ರೈತರು ಮತ್ತು ವರ್ತಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎಪಿಎಂಸಿ ಕಾರ್ಯದರ್ಶಿ ಅಭಿನಂದನ್, ಗುತ್ತಿಗೆದಾರ ಮಂಜುನಾಥ್, ಸಿಬ್ಬಂಧಿಗಳಾದ ಎಂ.ಹೆಚ್.ಧರ್ಮರಾಜ್, ಸಂತೋಷ್, ಶಿವಕುಮಾರ್ ಹಾಜರಿದ್ದರು.











