ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಮಾರ್ಚ್ 27ರಿಂದ ನಡೆಯಬೇಕಿದ್ದ 10ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಕುರಿತು ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು 10ನೇ ತರಗತಿ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ಜೂನ್ 25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಿ ಜುಲೈ 4ರ ವರೆಗೆ ನಡೆಯಲಿದ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇಂಗ್ಲಿಷ್ ಈ 4 ವಿಷಯಗಳಿಗೆ ಒಂದೊಂದು ದಿನದ ಅಂತರವನ್ನು ನೀಡಲಾಗಿದೆ. ಕೊರೊನಾ ಭೀತಿಯಿಂದ ತಮ್ಮ ಊರುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾವು ಇದ್ದ ಊರುಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ಮೇ 25ರ ಒಳಗೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಬಾರಿ 8,48,196 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆಗೆ 2,879 ಪರೀಕ್ಷಾ ಕೇಮದ್ರಗಳಲ್ಲಿ 43,720 ಕೊಠಡಿಗಳನ್ನು ಬಳಸಲಾಗುವುದು. ಪರೀಕ್ಷೆ ವೇಳೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಸ್ಕ್ ಧರಿಸುವುದು ಕಡ್ಡಾಯ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸರ್ ವ್ಯವಸ್ಥೆ ಇರುತ್ತದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ವೇಳೆ ಯಾವೊಬ್ಬ ವಿದ್ಯಾರ್ಥಿಯಲ್ಲಿ ಆರೋಗ್ಯದ ಸಮಸ್ಯೆ ಕಂಡು ಬಂದರೆ ಅವರಿಗೆ ಪ್ರತ್ಯೇಕವಾಗಿ ಬೇರೆ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಹಾಗೂ ಫಲಿತಾಂಶದ ಬಳಿಕ ಸಪ್ಲಿಮೆಂಟರಿ ಪರೀಕ್ಷೆ ಮಾಡಲಾಗುವುದು. ಹಾಗೂ ಜೂನ್ 18 ರಂದು ದ್ವಿತೀಯ ಪಿಯುಸಿಯ ಆಂಗ್ಲ ಭಾಷೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.










