ಬೆಂಗಳೂರು : ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ತಂದೆ-ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿಯಲ್ಲಿ ನಡೆದಿದೆ. ಯುವತಿ ಚೈತನ್ಯ(25), ಅವರ ತಂದೆ ಶಿವರಾಜ್(55) ಎಂಬುವರು ಗಂಭೀರವಾಗಿ ಗಾಯಗೊಂಡವರು.
ಕೆಲವೇ ದಿನಗಳಲ್ಲಿ ಮಗಳ ಮದುವೆ ಇದ್ದ ಕಾರಣ ತಂದೆ ಶಿವರಾಜ್ ಅವರು ಕಲ್ಯಾಣ ಮಂಟಪವೊಂದನ್ನು ಬುಕ್ ಮಾಡಿಕೊಂಡು ಸ್ಕೂಟಿಯಲ್ಲಿ ಮಂಗನಹಳ್ಳಿ ಬಳಿ ಹೋಗುತ್ತಿದ್ದಾಗ, ರಸ್ತೆ ಬದಿ ಇದ್ದ ಟ್ರಾನ್ಸ್ಫಾರ್ಮರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಶಿವರಾಜ್ ಹಾಗೂ ಚೈತನ್ಯರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸದ್ಯ ಇಬ್ಬರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಾನ್ಸ್ಫಾರ್ಮರ್ ಸ್ಫೋಟಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.










