ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಶ್ರೀ ಅವರು ಮಾಜಿ ಮುಖ್ಯಮಂತ್ರಿ ಅವರಿಗೆ ಕರೆ ಮಾಡಿದ್ದಾರೆ ಎಂಬ ವರದಿಯಾಗಿದ್ದು, ಈ ವಿಚಾರವಾಗಿ ಕೇಳಿ ಬರುತ್ತಿರುವ ಮಾಜಿ ಮುಖ್ಯಮಂತ್ರಿಯ ಹೆಸರು ಬಹಿರಂಗಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರೂಪಕಿ ಅನುಶ್ರೀ ಅವರ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಪ್ರಭಾವಿ ನಾಯಕರ ಹೆಸರಿನಲ್ಲಿ ಯಾವ ಮಾಜಿ ಮುಖ್ಯಮಂತ್ರಿ ಇದ್ದಾರೆ ಎಂಬುವುದನ್ನು ಜನರು ತಿಳಿದುಕೊಳ್ಳಬೇಕು. ಅವರ ಹೆಸರನ್ನು ಬಹಿರಂಗಪಡಿಸಿ. ನಾನು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಎಂಬುವುದು ಗೊತ್ತಾಗಬೇಕಿದೆ. ಅನುಶ್ರೀ ಅವರಿಗೆ ಯಾರು ಮಾಹಿತಿ ನೀಡಿದ್ದಾರೆ? ಅವರ ಬೆಂಬಲಕ್ಕೆ ಯಾವ ಮಾಜಿ ಸಿಎಂ ಇದ್ದಾರೆ ಎಂಬ ಸತ್ಯ ಗೊತ್ತಾಗಲಿ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ನಾನು ಮೊದಲೇ ಇದು ಹಳ್ಳ ಹಿಡಿಯುತ್ತದೆ ಎಂದು ಹೇಳಿದ್ದೆ. ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿವೆ. ಅನುಶ್ರೀ ವಿಚಾರದಲ್ಲಿ ಕೆಲವು ಪ್ರಭಾವಿ ನಾಯಕರ ಕೈವಾಡವಿದೆ. ಅವರ ಕಾಲ್ ಲಿಸ್ಟ್‍ನಲ್ಲಿ ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದವರು ಬೆಂಬಲಕ್ಕೆ ನಿಂತಿದ್ದಾರಾ ಎಂಬ ವರದಿಗಳು ಬರುತ್ತಿವೆ. ರಾಜ್ಯದಲ್ಲಿ ಈಗಾ ನಾನು, ಸಿದ್ದರಾಮಯ್ಯ, ಎಸ್.ಎಂ ಕೃಷ್ಣ, ಹಾಗೂ ಜಗದೀಶ್ ಶೆಟ್ಟರ್ ಅವರು ಸೇರಿ 6ಮಂದಿ ಮಾಜಿ ಸಿಎಂ ಗಳಿದ್ದೇವೆ. ಅವರಲ್ಲಿ ಯಾರು ಆ ಮಾಜಿ ಎಂದು ಹೆಸರನ್ನಾದರು ಹೇಳಬೇಕಲ್ಲಾ? ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುವುದನ್ನು ಸರ್ಕಾರಹೊರ ತರಬೇಕು. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುವುದನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು? ಮಾಜಿ ಸಿಎಂ ಮಗ ಎಂದೂ ಕೂಡಾ ವರದಿಗಳು ಬರುತ್ತಿವೆ. ಇಂತಹ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನು ಇದನ್ನು ತನಿಖೆಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.










