ದಸರಾ ಜಂಬೂಸವಾರಿ ಪುಷ್ಪಾರ್ಚನೆಗೆ ಪ್ರಧಾನಿ ಮೋದಿ ಬರಲ್ಲ : ಸಚಿವ ಎಸ್.ಟಿ.ಸೋಮಶೇಖರ್.

48
firstsuddi

ಮೈಸೂರು: ದಸರಾ ಜಂಬೂ ಸವಾರಿಯ ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅರಮನೆಯ ಭೇಟಿ ಬಗ್ಗೆ ಮಾಹಿತಿ ಕೇಳಲಾಗಿದೆ. ಇನ್ನೂ ರಾಷ್ಟ್ರಪತಿಗಳಿಂದ ಅದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ. ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರದ 4 ಮಂತ್ರಿಗಳು ಬರುವ ಸಾಧ್ಯತೆ ಇದೆ. ಅದರ ಆಧಾರದ ಮೇಲೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಯಾರಿರಬೇಕು ಎಂಬುದು ಅಂತಿಮವಾಗಲಿದೆ ಎಂದರು.

ಈ ಬಾರಿ ದಸರಾ ಪಾಸ್ ಹಾಗೂ ಗೋಲ್ಡ್ ಪಾಸ್ ಬಗ್ಗೆ ಇಂದು ಸಭೆ ನಡೆಯಲಿದ್ದು, ಸಂಜೆ ವೇಳೆಗೆ ಅಂತಿಮವಾಗಲಿದೆ. ಇದರ ಜೊತೆಗೆ ಯುವ ದಸರಾದಲ್ಲಿ ಯಾವೆಲ್ಲ ಕಾರ್ಯಕ್ರಮಗಳು ಇರಲಿವೆ ಎಂಬುದು ಸಹ ಇಂದೇ ಅಂತಿಮವಾಗಲಿದೆ. ದಸರಾಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಈ ಬಾರಿ ಮೈಸೂರು ನಗರದಲ್ಲಿ ಆಕರ್ಷಕವಾಗಿ ದೀಪಾಲಂಕಾರ ಮಾಡಲು 4.5 ಕೋಟಿ ಹಣ ನಿಗದಿ ಮಾಡಲಾಗಿದೆ. ಎಲ್ಲ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.