ಚಿತ್ರದುರ್ಗ : ಕೊರೊನಾ ಲಸಿಕೆ ನೀಡುವ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಹಾರ ರಾಜ್ಯಕ್ಕೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಭರವಸೆ ನೀಡಿದ್ದು, ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ಕೊರೊನಾ ವ್ಯಾಕ್ಸಿನ್ ತಯಾರಾಗಿಲ್ಲ. ವ್ಯಾಕ್ಸಿನ್ ತಯಾರಾಗದೆ ಬಿಜೆಪಿಯವರು ಉಚಿತ ಲಸಿಕೆ ನೀಡುತ್ತೇವೆ ಎಂದು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಬಿಹಾರಕ್ಕೆ ಮಾತ್ರ ಯಾಕೆ ಉಚಿತವಾಗಿ ಕೊಡಬೇಕು? ಇಡೀ ದೇಶಕ್ಕೆ ಕೊಡಬೇಕು. ಕೊರೊನಾ ವೈರಸ್ ಬಂದಿರುವುದು ಜನರ ತಪ್ಪಿಂದಲ್ಲ. ನರೇಂದ್ರ ಮೋದಿ ಅವರ ತಪ್ಪಿನಿಂದ. ಕೊರೊನಾ ಮೊದಲು ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕಾಗಿತ್ತು. ಅದರಿಂದಲೇ ಕೊರೊನಾ ಸೋಂಕು ಇಷ್ಟರ ಮಟ್ಟಿಗೆ ಹರಡಿದೆ. ದೇಶದ 80 ಲಕ್ಷ ಜನರ ಶಾಪ ಮೋದಿ ಅವರಿಗೆ ತಟ್ಟುತ್ತದೆ.
ಬಿಹಾರ ರಾಜ್ಯದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದು ಹೇಳಿರುವುದು ಕೇವಲ ಚುನಾವಣೆ ಗಿಮಿಕ್. ಲಸಿಕೆಗೆ ಬಳಕೆಯಾಗುವ ದುಡ್ಡು ಯಾರ ಅಪ್ಪನದ್ದು? ಅದು ನಮ್ಮ ದುಡ್ಡು, ಇಡೀ ದೇಶಕ್ಕೆ ಲಸಿಕೆಯನ್ನು ನೀಡಲಿ. ಬಿಹಾರದವರು ಮಾತ್ರ ಮನುಷ್ಯರಾ? ಕರ್ನಾಟಕದವರು ಮನುಷ್ಯರಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.










