ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆ ಬಲಿ…

48
firstsuddi

ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಆಕೆಯ ಮಗಳು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಮಾದೇವಿ(42) ಸಾವನ್ನಪ್ಪಿದ ಮಹಿಳೆ. ಪ್ರಕರಣ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಾರುತಿ ರಾವ್ ಅವರನ್ನು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ಉಮಾದೇವಿ ಪುತ್ರಿ ವನಿತಾ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:
ನಿನ್ನೆ ಶ್ರೀನಗರದಿಂದ ಮಾಗಡಿ ರೋಡ್ ಮೂಲಕ ಸುಜಾತ ಥಿಯೇಟರ್ ಬಳಿ ಉಮಾ ಅವರು ಪುತ್ರಿ ವನಿತಾ ಜತೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ರಸ್ತೆ ಗುಂಡಿ ತಪ್ಪಿಸುವ ಭರದಲ್ಲಿ ವನಿತಾ ಬ್ರೇಕ್ ಹಾಕಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಉಮಾ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಮೃತಪಟ್ಟಿದ್ದಾರೆ.