ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ.

77
firstsuddi

ಬೆಂಗಳೂರು : ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿ ಕೆರೆಯ ಕೋಡಿ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಕೆರೆ ಕೋಡಿ ಒಡೆದು ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗೆ ನೀರು ನುಗ್ಗಿದೆ. ಈ ಎಲ್ಲ ಅವಾಂತರಕ್ಕೆ ರಾಜಕಾಲುವೆ ಒತ್ತುವರಿ ಕಾರಣ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಯಲಹಂಕ ಕೆರೆಗೆ ಎರಡು ಕೋಡಿಗಳಿದ್ದು, ಎರಡು ರಾಜಕಾಲುವೆಗಳ ಅಗಲ ಕಡಿಮೆ ಇದೆ. ಯಲಹಂಕ ಕೆರೆ ದೊಡ್ಡದಾಗಿದ್ದು, ಕೋಡಿ ಬಿದ್ದಾಗ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಇಷ್ಟೊಂದು ಪ್ರಮಾಣದ ನೀರು ಹರಿಯಲು ರಾಜ ಕಾಲುವೆ ಸಾಕಾಗುತ್ತಿಲ್ಲ. ಹೀಗಾಗಿ ರಾಜಕಾಲುವೆ ಅತಿಕ್ರಮಣ ಆಗಿರುವುದರಿಂದ ಸಮಸ್ಯೆ ಆಗಿದೆ. ಮಳೆ ನಿಂತ ನಂತರ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಮುಖ್ಯ ಆಯುಕ್ತರು ಮತ್ತು ಮುಖ್ಯ ಇಂಜಿನಿಯರ್ ಗೆ ಸೂಚನೆ ನೀಡಿದ್ದು, 8 ಅಡಿಗಳ ರಾಜ ಕಾಲುವೆಯನ್ನು 30 ಅಡಿಗಳವರೆಗೂ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಈ ವರ್ಷ 50 ಕೀ.ಮೀ ರಾಜಕಾಲುವೆ ಕೆಲಸವಾಗುತ್ತದೆ. ಯಲಹಂಕ ಭಾಗದಲ್ಲಿ 400 ಮನೆಗಳಿಗೆ ಹಾನಿಯಾಗಿದ್ದು, 10 ಕಿ.ಮೀ ರಸ್ತೆ ಒಡೆದಿದೆ. ಅದನ್ನು 100 ಕಿ.ಮೀ ಹೆಚ್ಚಿಸಲು ಚಿಂತನೆ ಮಾಡಿದ್ದೇವೆ. ನೀರು ನುಗ್ಗಿ ಹಾನಿಯಾದ ಮನೆಗಳಿಗೆ 10 ಸಾವಿರ ಪರಿಹಾರ ಮತ್ತು ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದಿದ್ದರೆ 5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೊದಲ ಕಂತು ಒಂದು ಲಕ್ಷ ಬಿಡುಗಡೆ ಮಾಡುತ್ತೇವೆ ಎಂದು ಘೋಷಿಸಿದರು.