ಮೀಸಲಾತಿ ವಿಚಾರ – ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಎಂದ ಸಿಎಂ ಬೊಮ್ಮಾಯಿ.

70
firstsuddi

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರವಾಗಿ ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಮೀಸಲಾತಿ ಕುರಿತಂತೆ ನ್ಯಾಯಮೂತಿ೯ ನಾಗಮೋಹನ್ ದಾಸ್ ಸಮಿತಿ ಮತ್ತು ನ್ಯಾಯಮೂತಿ೯ ಸುಭಾಷ್ ಅಡಿ ಅವರ ಸಮಿತಿ ವರದಿಗಳು ಸಲ್ಲಿಕೆಯಾಗಿವೆ. ಸಂವಿಧಾನ ಮತ್ತು ಕಾನೂನಾತ್ಮಕ ವಿಚಾರವಾಗಿದೆ. ಈ ಸಂಬಂಧ ಸರ್ವ ಪಕ್ಷ ಸಭೆ ಕರೆದು ಚಚೆ೯ ಮಾಡಿ ಮುಂದಿನ ಹೆಜ್ಜೆಗಳನ್ನು ಇಡಬೇಕು ಎಂದು ಹೇಳಿದರು.

ಪ್ರತಿಪಕ್ಷದ ನಾಯಕರೊಂದಿಗೆ ಮಾತನಾಡಿ ದಿನಾಂಕ ನಿಗದಿ ಪಡಿಸಲಾಗುವುದು. ಎಸ್ಸಿ,ಎಸ್ಟಿ, ಒಬಿಸಿ ವಿಚಾರದಲ್ಲಿ ಆಯಾ ಜನಾಂಗಕ್ಕೆ ನ್ಯಾಯ ಕೊಡಿಸಲು, ಅವರ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಿಸಲು ಸರ್ಕಾರ ಬದ್ಧವಾಗಿದೆ. ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಮೀಸಲಾತಿ ಬೇಡಿಕೆ ಇಟ್ಟು ವಾಲ್ಮೀಕಿ ಸ್ವಾಮೀಜಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಸಿಎಂ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್ಸಿ, ಎಸ್ಟಿಗಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಮೀಸಲಾತಿ ಸಿಗಬೇಕು. ಮೀಸಲಾತಿ ಆಗ್ರಹಿಸಿ ವಾಲ್ಮೀಕಿ ಸಮಾಜದ ಸ್ವಾಮೀಜಿ ಧರಣಿ ಕೂತಿದ್ದಾರೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ. ಅದರ ಪ್ರಕಾರ ಎಸ್ಸಿ, ಎಸ್ಟಿ ಮೀಸಲಾತಿ ಶೇ.22ರಷ್ಟಾಗಬೇಕು. ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಏರಿಕೆಯಾಗಲಿದೆ. ಹೀಗಾಗಿ ವಿಳಂಬ ಮಾಡದೇ ಸರ್ವಪಕ್ಷ ಸಭೆ ಕರೆದು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.